ಹೊಸದೆಹಲಿ : ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯೊಬ್ಬರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಿಂದ ಕಾಯ್ದರೂ ವೈದ್ಯರ ಭೇಟಿಯೇ ಸಾಧ್ಯವಾಗಿಲ್ಲ. ಬಿಹಾರದ ಬೇಗುಸರಾಯ್ನಿಂದ ಬಂದಿರುವ 48 ವರ್ಷದ ಮಹಿಳೆ ಲಾಕ್ಡೌನ್ನಿಂದ ಅಕ್ಷರಶಃ ಅಲೆಮಾರಿಯಂತೆ ಜೀವನ ನಡೆಸುವಂತಾಗಿದೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಸಂತ್ರಸ್ತೆ, 'ನಾನು ವಿಪರೀತ ಕಿಡ್ನಿ ನೋವಿನಿಂದ ಬಳಲುತ್ತಿರುವೆ. ಸ್ಥಳೀಯ ವೈದ್ಯರಿಗೆ ತೋರಿಸಿದಾಗ ಅವರು ನೀಡುವ ಚುಚ್ಚುಮದ್ದಿನಿಂದ ತಾತ್ಕಾಲಿಕವಾಗಿ ನೋವು ಕಡಿಮೆಯಾಗುತ್ತೆ. ಆದರೆ, ನೋವು ತಡೆಯಲು ಸಾಧ್ಯವಾಗದ್ದರಿಂದ ಚಿಕಿತ್ಸೆಗಾಗಿ ದೆಹಲಿಗೆ ಬಂದರೆ, ಇಲ್ಲಿಯೂ ಚಿಕಿತ್ಸೆ ಸಿಗುತ್ತಿಲ್ಲ. ಅದೆಷ್ಟೋ ಬಾರಿ ಆಸ್ಪತ್ರೆಗೆ ಬಂದರೂ ಒಬ್ಬನೇ ಒಬ್ಬ ವೈದ್ಯನೂ ತನ್ನನ್ನು ನೋಡಲಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡರು.
'ಹೊಟೇಲ್ನಲ್ಲಿ ತಂಗುವಷ್ಟು ದುಡ್ಡು ನನ್ನ ಬಳಿ ಇಲ್ಲ. ಹೀಗಾಗಿ ಲಾಕ್ಡೌನ್ ಆದಾಗಿನಿಂದ ಆಸ್ಪತ್ರೆಯ ಆವರಣದಲ್ಲಿಯೇ ವಾಸಿಸುತ್ತಿರುವೆ. ಕೆಲ ಬಾರಿ ಸೆಕ್ಯೂರಿಟಿಯವರು ನನ್ನನ್ನು ಹೊರ ಹಾಕಿದಾಗ ಅಲ್ಲಲ್ಲಿ ತಿರುಗಾಡುತ್ತ ಅಲೆಮಾರಿಯಂತೆ ಕಾಲ ಕಳೆದಿದ್ದೇನೆ' ಎನ್ನುತ್ತಾ ಗದ್ಗದಿತಳಾದಳು ಸಂತ್ರಸ್ತೆ.
ದೆಹಲಿಯ ಪ್ರತಿಷ್ಠಿತ ಆಸ್ಪತ್ರೆ ಏಮ್ಸ್ ಮಾ24 ರಿಂದಲೇ ತನ್ನ ಒಪಿಡಿ, ಸ್ಪೆಷಾಲಿಟಿ ವಿಭಾಗ ಹಾಗೂ ಹಳೇ ರೋಗಿಗಳ ಮರು ತಪಾಸಣೆಗಳನ್ನು ನಿಲ್ಲಿಸಿದೆ. ಕೇವಲ ತುರ್ತು ಸೇವೆಗಳನ್ನು ಮಾತ್ರ ಆಸ್ಪತ್ರೆಯಲ್ಲಿ ಒದಗಿಸಲಾಗುತ್ತಿದೆ. ಹೀಗಾದರೆ ಕೊರೊನಾ ಹೊರತುಪಡಿಸಿದ ರೋಗಿಗಳ ಗತಿ ಏನು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.