ಗೋಪಾಲಗಂಜ್ (ಬಿಹಾರ): ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ದೇಶದ ಬಡವರ ಸ್ಥಿತಿ ಹೇಳತೀರದಾಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅದೆಷ್ಟೋ ಬಡ ಕುಟುಂಬಗಳು ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ.
ಬಿಹಾರದ ಗೋಪಾಲ್ ಗಂಜ್ನ ವಿರೇಂದ್ರ ಎಂಬ ವ್ಯಕ್ತಿಯೂ ಸಂಕಷ್ಟಕ್ಕೆ ಸಿಲುಕಿದವರಲ್ಲಿ ಒಬ್ಬರು. ಟಿಬಿ ಕಾಯಿಲೆಯಿಂದ ಬಳಲುತ್ತಿರುವ ವೀರೇಂದ್ರ ಅವರಿಗೆ ಚಿಕಿತ್ಸೆ ಬಿಡಿ, ಸರಿಯಾಗಿ ತಿನ್ನಲು ಅನ್ನ ಕೂಡ ಇಲ್ಲದಂತ ಪರಿಸ್ಥಿತಿ ಇದೆ.
ಕಳೆದ ಬಾರಿ ಗಂದಕ್ ನದಿಯಿಂದ ಉಂಟಾದ ಭಾರೀ ಪ್ರವಾಹಕ್ಕೆ ವೀರೇಂದ್ರ ಮನೆ ಕಳೆದುಕೊಂಡಿದ್ದಾರೆ. ಐದು ವರ್ಷಗಳ ಹಿಂದೆ ಪತ್ನಿ ಅನಾರೋಗ್ಯದಿಂದ ಮರಣ ಹೊಂದಿದ್ದಾರೆ. ಸದ್ಯ ಇವರ ಕುಟುಂಬದಲ್ಲಿ ಮೂರು ಜನರಿದ್ದಾರೆ. ಒಂದೆಡೆ ಟಿಬಿ ಕಾಯಿಲೆ, ಮತ್ತೊಂದೆಡೆ ಲಾಕ್ಡೌನ್, ಮಗದೊಂದೆಡೆ ಮಕ್ಕಳನ್ನು ಸಾಕುವ ಹೊಣೆಗಾರಿಕೆ. ಒಟ್ಟಿನಲ್ಲಿ ವಿರೇಂದ್ರ ಅವರ ಸಂಕಷ್ಟ ಹೇಳತೀರದ್ದಾಗಿದೆ.
ನನ್ನ ತಂದೆ ಬಸ್ ಕಂಡಕ್ಟರ್ ಆಗಿದ್ದರು. ಅನಾರೋಗ್ಯಕ್ಕೆ ತುತ್ತಾದ ಬಳಿಕ ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ನಮಗೆ ಜೀವನ ನಡೆಸಲು ತುಂಬಾ ಕಷ್ಟವಾಗಿದೆ. ನನ್ನ ವಿದ್ಯಾಭ್ಯಾಸ ಮೊಟಕುಗೊಂಡಿದೆ ಎಂದು ವೀರೇಂದ್ರ ಅವರ ಮಗ ವಿಕಾಶ್ ಅಳಲು ತೋಡಿಕೊಂಡಿದ್ದಾರೆ.
ಇದು ಒಬ್ಬ ವೀರೇಂದ್ರನ ಕಥೆ ಮಾತ್ರ. ಇದೇ ರೀತಿ ದೇಶದ ಮೂಲೆ ಮೂಲೆಗಳಲ್ಲಿ ಕೋಟ್ಯಂತರ ವಲಸೆ ಕಾರ್ಮಿಕರು, ನಿರ್ಗತಿಕರು, ಬಡವರು ಕೊಳಗೇರಿ ನಿವಾಸಿಗಳು ಲಾಕ್ಡೌನ್ನಿಂದಾಗಿ ಪ್ರತಿನಿತ್ಯ ಹಸಿವಿನಿಂದ ಬಳಲುತ್ತಿದ್ದಾರೆ.