ನವದೆಹಲಿ/ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಕಣ ರಂಗೇರಿದೆ. ಆರ್‌ಜೆಡಿ ನಾಯಕ ಹಾಗೂ ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ನಡೆಯುತ್ತಿರುವ ಜಿದ್ದಾಜಿದ್ದಿ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡದೇ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಮೂರನೇ ಎರಡರಷ್ಟು ಬಹುಮತ ಪಡೆಯುವ ಮೂಲಕ ಬಿಹಾರ ರಾಜ್ಯ ಇತಿಹಾಸ ಬರೆಯಲಿದೆ. ಮತ ಎಣಿಕೆಯ ದಿನವಾದ ನವೆಂಬರ್ 10 "ಬಿಹಾರ ಹೊಸ ಉದಯಕ್ಕೆ ಸಾಕ್ಷಿಯಾಗಲಿದೆ" ಎಂದು ಹೇಳಿದರು.
ಮಾತಿನುದ್ದಕ್ಕೂ ಕೇಂದ್ರ ಹಾಗೂ ಎನ್ಡಿಎ ಮೈತ್ರಿ ಕೂಟದ ವಿರುದ್ಧ ವಾಗ್ದಾಳಿ ನಡೆಸಿದ ತೇಜಸ್ವಿ ಯಾದವ್, 15 ವರ್ಷಗಳ ಕಾಲ ಯುವ ಸಮೂದಾಯವನ್ನು ಮರೆತ ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಪಾಠ ಕಲಿಸಲಾಗುತ್ತದೆ. ಸರ್ಕಾರ ಆಡಳಿತಕ್ಕೆ ಬಂದ ಒಂದೇ ದಿನದಲ್ಲಿ ರಾಜ್ಯದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಿಸಲು ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಮೊದಲ ಬಾರಿಗೆ ಇಲ್ಲಿನ ಯುವಕರಿಗೆ 10 ಲಕ್ಷ ಉದ್ಯೋಗಗಳನ್ನು ನೀಡುವುದರ ಮೂಲಕ ಮಹತ್ವದ ಹೆಜ್ಜೆ ಇಡಲಾಗುತ್ತಿದೆ. ಮೊಟ್ಟ ಮೊದಲ ಕ್ಯಾಬಿನೆಟ್ ಸಭೆಯಲ್ಲಿಯೇ ಕೇಂದ್ರ ಸರ್ಕಾರ ಜಾರಿಗೆ ತಂದ "ರೈತ ವಿರೋಧಿ" ಕಾನೂನುಗಳನ್ನು ರದ್ದುಗೊಳಿಸಲು ಹೋರಾಟ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಎಷ್ಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದೀರಿ ಎಂಬ ಪ್ರಶ್ನೆಗೆ, ಬಿಹಾರದ ಮಾಜಿ ಉಪ ಮುಖ್ಯಮಂತ್ರಿಯಂತೆ ನಾನು ಜ್ಯೋತಿಷಿ ಅಲ್ಲ. ಆದರೆ, ನಾನು ಪ್ರಚಾರಕ್ಕೆ ಹೋದಾಗಲೆಲ್ಲ ಸಾರ್ವಜನಿಕ ಸ್ವಾಗತ ನೋಡಿದರೆ ಈ ಸಾರಿ ನಮಗೆ ಜನತೆ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಜವಾಬ್ದಾರಿಯುತ ಬಿಹಾರ್ ಜನತೆ ಬದಲಾವಣೆಗೆ ಬಯಸಿದ್ದಾರೆ. ಹಾಗಾಗಿ "ಮೂರನೇ ಎರಡರಷ್ಟು ಬಹುಮತ" ಸಿಗಲಿದೆ ಎಂದು ಯಾದವ್ ವಿಶ್ವಾಸ ವ್ಯಕ್ತಪಡಿಸಿದರು.
ಹಲವು ಕ್ಷೇತ್ರಗಳಲ್ಲಿ ಎನ್ಡಿಎ ಮೈತ್ರಿ ಕೂಟದ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವ ಸಮಯ ಬಂದಿದೆ. ಫಲಿತಾಂಶದ ಬಳಿಕ ಪಶ್ಚಾತಾಪ ಮಾಡಿಕೊಳ್ಳುತ್ತಾರೆ ಎಂದು ನಾನು ನಿಮಗೆ ವಿಶ್ವಾಸದಿಂದ ಹೇಳಬಲ್ಲೆ. ನವೆಂಬರ್ 10 ರಂದು ಬನ್ನಿ ಬಿಹಾರವು ಹೊಸ ಉದಯಕ್ಕೆ ಸಾಕ್ಷಿಯಾಗಲಿದೆ ಎಂದರು.
ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವುದು ನಮ್ಮ ಪ್ರಮುಖ ಆದ್ಯತೆ ಎಂದು ತಮ್ಮ ಪಕ್ಷದ ಪ್ರಣಾಳಿಕೆ ಬಗ್ಗೆ ವಿವರಣೆ ನೀಡಿದ ತೇಜಸ್ವಿ ಯಾದವ್, 15 ವರ್ಷಗಳ (ಮುಖ್ಯಮಂತ್ರಿ) ನಿತೀಶ್ ಕುಮಾರ್ ಆಳ್ವಿಕೆಯಲ್ಲಿ ನಿರ್ಲಕ್ಷಿಸಲ್ಪಟ್ಟ ಕ್ಷೇತ್ರಗಳನ್ನು ಮತ್ತೆ ಕಟ್ಟಲಾಗುತ್ತದೆ ಎಂದರು.
ಬುಧವಾರ ಬಿಹಾರದಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ನವೆಂಬರ್ 3 ಮತ್ತು 7 ರಂದು ಎರಡು ಹಾಗೂ ಮೂರನೇ ಹಂತದ ಮತದಾನ ನಡೆಯಲಿದೆ. ನವೆಂಬರ್ 10ಕ್ಕೆ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. 243 ಸದಸ್ಯರ ಸಂಖ್ಯಾಬಲವನ್ನು ಹೊಂದಿರುವ ಬಿಹಾರದ ವಿಧಾನಸಭೆಯಲ್ಲಿ ಕಳೆದ ಸಾರ್ವತ್ರಿಕ ಚುನಾವಣೆ (2015) ಯಲ್ಲಿ ಆರ್‌ಜೆಡಿ 81 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 27 ಸ್ಥಾನಗಳನ್ನು ಗಳಿಸಿತ್ತು.