ಬಿಹಾರ: ರಾಜ್ಯದ ಮೊದಲ ಹಂತದ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ನಿನ್ನೆಯೇ ಚುನಾವಣಾ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ರಾಜ್ಯದ ಚುಕ್ಕಾಣಿ ಹಿಡಿಯಲು ಎಲ್ಲ ಪಕ್ಷಗಳು ಕೊನೆ ಹಂತದ ಕಸರತ್ತು ನಡೆಸುತ್ತಿವೆ.
ಚುನಾವಣಾ ಪ್ರಚಾರ ಸಭೆ ವೇಳೆ ಸಿಎಂ ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ ಹಾಗೂ ರಾಬ್ರಿ ದೇವಿಯರು ಹೆಚ್ಚಿನ ಮಕ್ಕಳು ಹೊಂದಿರುವ ಕಾರಣಕ್ಕಾಗಿ ಟೀಕಿಸಿದ್ದರು. ಇದಕ್ಕೆ ಗರಂ ಆಗಿರುವ ತೇಜಸ್ವಿ ಯಾದವ್, ಜೆಡಿಯು ಮುಖ್ಯಸ್ಥರಾಗಿರುವ ನಿತೀಶ್ ಕುಮಾರ್, ನನ್ನ ತಾಯಿಯ ಭಾವನೆಗಳನ್ನು ಅವಮಾನಿಸಿದ್ದಾರೆ. ಈ ಮೂಲಕ ಮಹಿಳೆಯರಿಗೆ ಹೆಚ್ಚಿನ ಗೌರವ ಕೊಡುವ ಪ್ರಧಾನಿ ಮೋದಿಯವರನ್ನೂ ಅವರು ಗುರಿಯಾಗಿಸಿದ್ದಾರೆ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸಿಎಂ ನಿತೀಶ್ ಕುಮಾರ್ ಅವರು ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಅವರನ್ನು ಜಮುರಾ (ಮಂಗನನ್ನು ಹೋಲುವ ಪ್ರಾಣಿ) ಗೆ ಹೋಲಿಸಿದ್ದರು. 2011 ರಲ್ಲಿ ಚಿರಾಗ್ ನಟನೆಯ ಸಿನಿಮಾವೊಂದು ರಿಲೀಸ್ ಆಗಿ ಫ್ಲ್ಯಾಪ್ ಆಯಿತು. ಅದೇ ರೀತಿ, ಈ ಚುನಾವಣೆಯಲ್ಲೂ ಅವರು ಫ್ಲ್ಯಾಪ್ ಆಗುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಚಿರಾಗ್, ನಾನು ಸಿನಿಮಾದಲ್ಲಿ ನಟಿಸಿ 9 ವರ್ಷಗಳಾಗಿವೆ. ಅಂದಿನಿಂದ ಮಾತನಾಡದ ಸಿಎಂ ಈಗೇಕೆ ಮಾತಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ನಾಳೆ ಮೊದಲ ಹಂತದ ಫೈಟ್:
ನಾಳೆ (ಅಕ್ಟೋಬರ್ 28) ರಾಜ್ಯದಲ್ಲಿ ಮೊದಲ ಹಂತದಲ್ಲಿ 71 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಎಲೆಕ್ಷನ್ ನಡೆಯಲಿರುವ ಕ್ಷೇತ್ರಗಳೆಲ್ಲಾ ನಕ್ಸಲ್ ಪೀಡಿತ ಪ್ರದೇಶಗಳಾಗಿವೆ. ಚುನಾವಣೆಯಲ್ಲಿ 1,066 ಅಭ್ಯರ್ಥಿಗಳು ಅಖಾಡದಲ್ಲಿದ್ದು, ಅವರಲ್ಲಿ 114 ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ.
ಆರ್ಜೆಡಿ 71 ಸ್ಥಾನಗಳ ಪೈಕಿ ಮೊದಲ ಹಂತದಲ್ಲಿ 42 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಳಿಸುತ್ತಿದೆ. ಜೆಡಿಯು 41, ಬಿಜೆಪಿ, 29 ಸ್ಥಾನ, ಕಾಂಗ್ರೆಸ್ 21, ಎಲ್ಜೆಪಿ 41 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
ಇವರ ರಾಜಕೀಯ ಭವಿಷ್ಯ ನಿರ್ಧಾರ:
ನಾಳಿನ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿರುವ ಪ್ರೇಮ್ ಕುಮಾರ್, ಕುಮಾರ್ ಸಿಂಗ್, ಸಂತೋಷ್ ಕುಮಾರ್ ನಿರಾಲಾ, ವಿಜಯ್ ಸಿನ್ಹಾ ಮತ್ತು ರಾಮ್ ನಾರಾಯಣ್ ಮಂಡಲ್ ಭವಿಷ್ಯ ನಿರ್ಧಾರವಾಗಲಿದೆ.