ಅಯೋಧ್ಯೆ: ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಸಲಿದ್ದು, ಅದಕ್ಕೂ ಮುಂಚಿತವಾಗಿ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರಿಶೀಲನೆ ನಡೆಸಿದರು.
ಈ ವೇಳೆ ಶ್ರೀ ರಾಮ, ಆಂಜನೇಯನ ಪೂಜೆಯಲ್ಲಿ ಭಾಗಿಯಾದ ಯೋಗಿ ಆದಿತ್ಯನಾಥ್, ರಾಮ ಜನ್ಮಭೂಮಿಯಲ್ಲಿ ಲಕ್ಷ್ಮಣ, ಭರತ್ ಮತ್ತು ಶತ್ರುಘ್ನ ವಿಗ್ರಹ ಹೊಸ ಆಸನದಲ್ಲಿರಿಸಿ ಪೂಜೆ ಮಾಡಿದರು. ಇದಾದ ಬಳಿಕ ಉತ್ತರಪ್ರದೇಶ ಸಂಸದರು ಹಾಗೂ ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರ ಜೊತೆ ಯೋಗಿ ಆದಿತ್ಯನಾಥ್ ಮಹತ್ವದ ಚರ್ಚೆ ನಡೆಸಿದರು.
ಅಯೋಧ್ಯೆಯಲ್ಲಿ ಶ್ರೀರಾಮ, ಆಂಜನೇಯನ ಪೂಜೆ ನೆರವೇರಿಸಿದ ಸಿಎಂ ಯೋಗಿ!
ಈ ವೇಳೆ ಮಾತನಾಡಿದ ಅವರು, ರಾಮಜನ್ಮ ದೇಗುಲದ ಭೂಮಿ ಪೂಜೆ ದೀಪಾವಳಿ ರೀತಿಯಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಅಯೋಧ್ಯೆಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದಿರುವ ಅವರು, ಈ ಕ್ಷೇತ್ರವನ್ನ ಭಾರತ ಮಾತ್ರವಲ್ಲದೇ ವಿಶ್ವದಲ್ಲೂ ಪ್ರಸಿದ್ಧಿಯಾಗುವ ರೀತಿಯಲ್ಲಿ ಮಾಡಲಾಗುವುದು ಎಂದರು. ಭೂಮಿ ಪೂಜೆ ಕಾರ್ಯಕ್ರಮದ ದಿನದಿಂದ ಮುಂದಿನ ಐದು ದಿನಗಳ ಕಾಲ ಅಯೋಧ್ಯೆಯಲ್ಲಿ ವಾಸವಾಗಿರುವ ಪ್ರತಿ ಕುಟುಂಬದ ಮನೆಯಲ್ಲಿ ದೀಪ ಉರಿಯಲಿವೆ ಎಂದು ತಿಳಿಸಿದರು. ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿರುವ ಮಧ್ಯೆ ರಾಮಮಂದಿರ ಭೂಮಿ ಪೂಜೆ ಕಾರ್ಯ ನಡೆಯುತ್ತಿದ್ದು, ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ.