ಕೊಲ್ಲಾಪುರ/ ಚಿಕ್ಕೋಡಿ: ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಗಡಿಯಲ್ಲಿ ಶಿವಸೇನೆ ತನ್ನ ಉದ್ಧಟತವನ್ನು ಮತ್ತೆ ಪ್ರದರ್ಶಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ಕನ್ನಡಪರ ಹೋರಾಟಗಾರ/ ಕರ್ನಾಟಕ ನವ ನಿರ್ಮಾಣ ಸೇನಾ ಅಧ್ಯಕ್ಷ ಭೀಮಾಶಂಕರ ಪಾಟೀಲ್ ಅವರು ಕೇಂದ್ರ ಸಚಿವ ಅಂಗಡಿಯವರಿಗೆ, 'ತಾಕತ್ತಿದ್ದರೆ ಕನ್ನಡ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಮಹಾರಾಷ್ಟ್ರ ನವ ನಿರ್ಮಾಣ ಸೇನಾ (ಎಂಇಎಸ್) ಕಾರ್ಯಕರ್ತರ ಮೇಲೆ ಗುಂಡು ಹಾರಿಸುವಂತೆ' ತಾಕೀತು ಮಾಡಿದ್ದರು.
ಈ ಹೇಳಿಕೆಯನ್ನು ಖಂಡಿಸಿ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಶಿವಸೇನೆ ಕಾರ್ಯಕರ್ತರು ಭೀಮಾಶಂಕರ ಪಾಟೀಲ್ ಅವರ ಅಣಕು ಶವಯಾತ್ರೆ ನಡೆಸಿ ಬಳಿಕ ಅವರ ಪ್ರತಿಕೃತಿಯನ್ನು ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಸೇನೆ ಕಾರ್ಯಕರ್ತರು, ಮಹಾರಾಷ್ಟ್ರ ಗಡಿಭಾಗದ ಕುಂಗನೊಳ್ಳಿ ಹಾಗೂ ಕಾಗಲ್ ನಡುವಿನ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಈ ಕೃತ್ಯ ಎಸಗಿದ್ದಾರೆ. 'ನಮ್ಮ ವಿರುದ್ಧ ನಿಂತವರನ್ನು ಉಳಿಸೋದಿಲ್ಲ. ಭೀಮಾಶಂಕರ ಓರ್ವ ಸ್ವಯಂಘೋಷಿತ ನಾಯಕ. ಮಹಾರಾಷ್ಟ್ರ ಬಗ್ಗೆ ಮಾತಾನಾಡುವಾಗ ಎಚ್ಚರಿಕೆಯಿಂದ ವರ್ತಿಸುವಂತೆ' ಕೊಲ್ಲಾಪುರ ಜಿಲ್ಲಾ ಶಿವಸೇನೆ ಅಧ್ಯಕ್ಷ ವಿಜಯ ಭವಾನಿ ಹೇಳಿದ್ದಾರೆ.