ನವದೆಹಲಿ/ಬೆಂಗಳೂರು:ಭಾರತದ ರೈತಾಪಿ ವರ್ಗ ಪ್ರಧಾನವಾಗಿ ಅವಲಂಬಿಸಿರುವ ನೈಋತ್ಯ ಮುಂಗಾರು ಜೂನ್ 4ರಂದು ಕೇರಳ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ದೇಶದ ಏಕೈಕ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ತಿಳಿಸಿದೆ.
ಈ ಬಾರಿ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಶೇ 93 ರಷ್ಟು ಮಳೆಯಾಗಲಿದೆ. ಎಲ್- ನೀನೊ (ಸಮುದ್ರ ತಾಪಮಾನದಲ್ಲಿ ಅಸಹಜ ಹೆಚ್ಚಳ) ಪರಿಣಾಮದಿಂದ ಮಳೆ ಕಡಿಮೆಯಾಗಲಿದೆ. ಶೇ 15ರಷ್ಟು ಬರಗಾಲದ ಛಾಯೆ ಆವರಿಸಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಸಾಮಾನ್ಯವಾಗಿ ಜೂನ್ 1ರಂದು ಕೇರಳಕ್ಕೆ ಮುಂಗಾರು ಮಳೆ ಪ್ರವೇಶವಾಗುತ್ತದೆ. ಮೇ 22ರ ವೇಳೆಗೆ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಿಗೆ ಮುಂಗಾರು ಪ್ರವೇಶಿಸಲಿದೆ. ನೈಋತ್ಯ ಮುಂಗಾರು ಪ್ರವೇಶ ಎರಡು ಮೂರು ದಿನ ಹೆಚ್ಚು ಕಡಿಮೆಯಾಗಲಿದೆ ಎಂದು ತಿಳಿಸಿದೆ.
ಸ್ಕೈಮೆಟ್ ಊಹೆಯನ್ವಯ, ಶೇ 96ರಿಂದ ಶೇ 104ರಷ್ಟು ದೀರ್ಘಾವಧಿ ಸರಾಸರಿಯ (ಎಲ್ಪಿಎ) ಮಳೆಯ ಪ್ರಮಾಣ ಶೇ 30ರಷ್ಟು ಇರಲಿದೆ. ಶೇ 90ರಿಂದ ಶೇ 95 ಸುರಿಯುವ ಎಲ್ಪಿಎ ಸಾಮಾನ್ಯಕ್ಕಿಂತ ಕಡಿಮೆ ಹಾಗೂ ಶೇ 15ರಷ್ಟು ಬರದ ಛಾಯೆ ಮೂಡಲಿದೆ. ಸರಾಸರಿ ಮಳೆಯ ಪ್ರಮಾಣ ಶೇ 90ಕ್ಕಿಂತ ಕಡಿಮೆ ಆಗಲಿದೆ ಎಂದು ತಿಳಿಸಿದೆ.
ಈ ಋತುಮಾನದಲ್ಲಿ ದೇಶದ ನಾಲ್ಕು ಭಾಗಗಳಲ್ಲಿಯೂ ಮುಂಗಾರು ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ. ವಾಯುವ್ಯ ಮತ್ತು ದಕ್ಷಿಣ ಪರ್ಯಾಯ ದ್ವೀಪಗಳ ಭಾಗಗಳಿಗೆ ಹೋಲಿಸಿದರೆ, ಪೂರ್ವ ಮತ್ತು ಈಶಾನ್ಯ ಭಾರತ ಮತ್ತು ಕೇಂದ್ರ ಪ್ರದೇಶಗಳಲ್ಲಿ ಕಡಿಮೆ ಮಳೆಯಾಗಲಿದೆ ಎಂದು ತಿಳಿಸಿದೆ.
ರಾಯಲ್ಸೀಮಾ ಒಳಗೊಂಡಂತೆ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಭಾಗಗಳಲ್ಲಿ ಕನಿಷ್ಠ ಮಟ್ಟದ ಮಳೆ ಬಿದ್ದರೇ ದಕ್ಷಿಣ ಒಳನಾಡಿನ ಕೇರಳಕ್ಕೆ ಹೊಂದಿಕೊಂಡ ಪ್ರದೇಶ ಹಾಗೂ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗಲಿದೆ.
ಈ ಭಾಗದಲ್ಲಿ ಶೇ 10ರಷ್ಟು ಮಳೆ ಕೊರತೆ ಉಂಟಾಗಲಿದೆ. ಶೇ 115ರಷ್ಟು ವಾಡಿಕೆಗಿಂತ ಕಡಿಮೆ, ಶೇ 60ರಷ್ಟು ಸಾಮಾನ್ಯ, ಶೇ 10ರಷ್ಟು ವಾಡಿಕೆಗಿಂತ ಅಧಿಕ ಹಾಗೂ ಶೇ 5ರಷ್ಟು ಹೆಚ್ಚುವರಿ ಮಳೆ ಸುರಿಯಲಿದೆ ಎಂದು ಮಾಹಿತಿ ನೀಡಿದೆ.
ಈ ಬಾರಿ ರಾಜ್ಯದಲ್ಲಿ ನಿರೀಕ್ಷೆಯಂತೆ ಸಮರ್ಪಕ ಮಳೆಯಾಗುವ ಸಾಧ್ಯತೆ ಇಲ್ಲ. ಈಗಾಗಲೇ ಬರಗಾಲದಿಂದ ಸಾಕಷ್ಟು ನಲುಗಿ ಹೋಗಿರುವ ರಾಜ್ಯ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ಎದುರಿಸಲಿದೆ ಎನ್ನಲಾಗುತ್ತಿದೆ. ಹವಾಮಾನ ಇಲಖೆಯ ಈ ಮುನ್ನೆಚ್ಚರಿಕೆ ಮತ್ತೊಂದು ಬರ ನಿರ್ವಹಣೆಗೆ ಸಜ್ಜಾಗುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ಎಚ್ಚರಿಕೆ ಗಂಟೆಯಂತಿದೆ.