ಢಾಕಾ (ಬಾಂಗ್ಲಾದೇಶ): ಎಲ್ಲಾ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಆಯಾ ಸರ್ಕಾರಗಳು ಎಷ್ಟೇ ಮನವಿ ಮಾಡಿಕೊಂಡರು ಕೆಲವು ಜನರು ಇದಕ್ಕೆ ಕ್ಯಾರೆ ಅನ್ನುತ್ತಿಲ್ಲ. ಇಲ್ಲಿನ ಮುಸ್ಲಿಂ ಧರ್ಮಗುರುವೊಬ್ಬರ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದು, ಇದನ್ನು ತಡೆಯಲು ಮುಂದಾಗದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.
ಬ್ರಹ್ಮನ್‌ಬರಿಯಾದಲ್ಲಿನ ಸರೈಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಕೊರೊನಾ ಭೀತಿ ಹಿನ್ನೆಲೆ ಜನರು ಗುಂಪಾಗಿ ಇರುವುದನ್ನು ನಿಷೇಧಿಸಲಾಗಿದೆ. ಇಷ್ಟಾದರೂ ಇಲ್ಲಿ ಸಾವಿರಾರು ಜನರು ಸೇರಿದ್ದರಿಂದ ಹಾಗೂ ಈ ಕಾರ್ಯಕ್ರಮವನ್ನು ತಡೆಯಲು ವಿಫಲವಾದ್ದರಿಂದ ಠಾಣೆಯ ಶಹಾದತ್ ಹೊಸೈನ್ ಟಿಟು ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ಬೆರ್ಟೋಲಾ ಗ್ರಾಮದ ಮದ್ರಸಾದಲ್ಲಿ ಧರ್ಮಗರು ಮೌಲಾನಾ ಜುಬಾಯರ್ ಅಹ್ಮದ್ ಅನ್ಸಾರಿ ಅವರ ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಸಾವಿರಾರು ಜನರು ಮುಖಗವಸು ಹಾಗೂ ಸಾಮಾಜಿಕ ಅಂತರವೂ ಇಲ್ಲದೆ ಎಲ್ಲಾ ಆದೇಶವನ್ನು ಉಲ್ಲಂಘನೆ ಮಾಡಿದ್ದರು.