ಉತ್ತರ ಪ್ರದೇಶ: ಮೂಢನಂಬಿಕೆ ಎಂದು ಹೇಳಲಾದರೂ, 'ಭೂತ' ಎಂಬ ಪದ ಕೇಳಿದ ಕೂಡಲೇ ನಮ್ಮ ಮುಂದೆ ಭಯಾನಕ ಮುಖ ಬಂದಂತೆ ಭಾಸವಾಗುತ್ತದೆ. ಹೀಗಿರುವಾಗ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಕಾಶಿ ಹಿಂದೂ ವಿವಿ)ಈ ಬಾರಿಯಿಂದ ದೆವ್ವಗಳ ಕುರಿತು ಹೊಸ ಕೋರ್ಸ್ ಪ್ರಾರಂಭಿಸಲಿದೆ ಎಂಬುದು ಆಶ್ಚರ್ಯವಾದರೂ ಸತ್ಯವಾಗಿದೆ.
ಕೋರ್ಸ್‌ನ ವಿಶೇಷತೆ ಏನು?
ವಿಶ್ವವಿದ್ಯಾಲಯದ ಆಯುರ್ವೇದ ವಿಭಾಗದಲ್ಲಿ 'ಭೂತ್ ವಿಜ್ಞಾನ್' ಕೋರ್ಸ್, ಜನವರಿ ತಿಂಗಳಿನಿಂದ ಪ್ರಾರಂಭವಾಗಲಿರುವ ಬಗ್ಗೆ ವಿವಿಯಿಂದ ಅಧಿಸೂಚನೆ ಹೊರಡಿಸಲಾಗಿದೆ. 6 ತಿಂಗಳ ಕೋರ್ಸ್ ಇದಾಗಿರಲಿದ್ದು, ಜನವರಿಯಿಂದ ಜೂನ್‌ವರೆಗೆ ಒಂದು ಬ್ಯಾಚ್ ಹಾಗೂ ಜುಲೈನಿಂದ ಡಿಸೆಂಬರ್ವರೆಗೆ ಒಂದು ಬ್ಯಾಚ್, ಹೀಗೆ ವರ್ಷದಲ್ಲಿ ಎರಡು ಬ್ಯಾಚ್ ಇರಲಿದೆ. ಆಯುರ್ವೇದ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.
'ಭೂತ್ ವಿಜ್ಞಾನ್' ಕೋರ್ಸ್, ಭೂತ ಶಿಕ್ಷಣದ ಪರಿಕಲ್ಪನೆಗಳು ಮತ್ತು ಭೂತ ಶಿಕ್ಷಣದ ಪರಿಹಾರದ ಅಂಶಗಳು ಎಂಬ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಭೂತ ಶಿಕ್ಷಣದ ಬಗ್ಗೆ ಸಂಶೋಧನೆ ನಡೆಸಿರುವ ವಿವಿಯ ಆಯುರ್ವೇದ ವಿಭಾಗ್ ಪ್ರೊಫೆಸರ್ರ ನೇತೃತ್ವದಲ್ಲಿ ಕೋರ್ಸ್‌ನ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ.
ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರಾರಂಭವಾಗುವ ಈ ಕೋರ್ಸ್ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಉತ್ಸಾಹವಿದ್ದು, ಸಮಾಜದಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ದೆವ್ವಗಳ ಬಗ್ಗೆ ಇರುವ ತಪ್ಪು ಕಲ್ಪನೆ, ಗೊಂದಲ, ಮೂಢನಂಬಿಕೆಗಳನ್ನು ತೆಗೆದುಹಾಕುವಲ್ಲಿ ಇದು ಅತ್ಯಂತ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವಿವಿಯದ್ದಾಗಿದೆ.