ನವದೆಹಲಿ: ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ನೇಮಕವಾಗಿರುವ ಮಧ್ಯಸ್ಥಿಕೆ ತಂಡದ ಒಟ್ಟಾರೆ ಸ್ಥಿತಿಗತಿಯ ಪರಿಶೀಲನೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಲಿದೆ.
ಇಂದಿನ ಪರಿಶೀಲನೆಯಲ್ಲಿ ಮುಖ್ಯವಾಗಿ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಎಲ್ಲಿ ನಡೆಸಬೇಕು ಮತ್ತು ಮಧ್ಯಸ್ಥಿಕೆಯಲ್ಲಿ ಇನ್ನಷ್ಟು ಗುಂಪುಗಳೊಂದಿಗೆ ಮಾತುಕತೆ ಅವಕಾಶ ನೀಡಬೇಕೇ ಎನ್ನುವ ಕುರಿತು ತೀರ್ಮಾನಕ್ಕೆ ಬರಲಿದೆ.
ಜುಲೈ 18ರಂದು ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಸವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪಂಚ ಸದಸ್ಯ ಪೀಠ, ಆಗಸ್ಟ್ ಒಂದರಿಂದ ಮಧ್ಯಸ್ಥಿಕೆಯಲ್ಲಿ ಕಂಡುಬಂದ ಅಂಶಗಳ ಬಗ್ಗೆ ಪೀಠಕ್ಕೆ ತಿಳಿಸುವಂತೆ ಮಧ್ಯಸ್ಥಿಕೆದಾರರಿಗೆ ಸೂಚಿಸಿತ್ತು.
ಸುಮಾರು ಎರಡು ದಶಕಗಳ ಅಯೋಧ್ಯೆ ಭೂವಿವಾದವನ್ನು ಸುಪ್ರೀಂ ನಿರ್ಧರಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ, ಮೂವರು ಸದಸ್ಯರ ಮಧ್ಯಸ್ಥಿಕೆ ತಂಡವನ್ನು ಕಳೆದ ವರ್ಷ ನೇಮಕ ಮಾಡಿತ್ತು.
ಸುಪ್ರೀಂನ ಮಾಜಿ ನ್ಯಾಯಮೂರ್ತಿ ಎಫ್.ಎಂ.ಖಲೀಫುಲ್ಲಾ, ಧಾರ್ಮಿಕ ಮುಖಂಡ ಶ್ರೀ ಶ್ರೋ ರವಿಶಂಕರ್ ಹಾಗೂ ಕಾನೂನು ತಜ್ಞ ಶ್ರೀರಾಮ್ ಪಂಚುರನ್ನು ಸುಪ್ರೀಂ ಕೋರ್ಟ್ ನೇಮಕ ಮಾಡಿ ಮಧ್ಯಸ್ಥಿಕೆ ಮೂಲಕ ವಿವಾದಕ್ಕೆ ಕೊನೆ ಹಾಡುವ ಪ್ರಯತ್ನ ಮಾಡಿತ್ತು.