ಡಿಸ್ಪೂರ್ : ಮಾನ್ಸೂನ್ ಅಸ್ಸೋಂ ರಾಜ್ಯದಲ್ಲಿ ತನ್ನ ಪ್ರಭಾವ ಬೀರಿದೆ. ಕಳೆದ ಕೆಲವು ದಿನಗಳಿಂದ ವಿಪರೀತ ಮಳೆಯಾಗುತ್ತಿದೆ. ಇದೀಗ ಪ್ರವಾಹ ಭೀಕರವಾಗಿದೆ. ಪರಿಣಾಮ 23 ಜಿಲ್ಲೆಗಳಲ್ಲಿ 9,26,059 ಜನ ಸಂಕಷ್ಟಕ್ಕೀಡಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಪ್ರವಾಹ ಪೀಡಿತ 23 ಜಿಲ್ಲೆಗಳಲ್ಲಿ ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಉದಲ್ಗಿರಿ, ದಾರಂಗ್, ನಲ್ಬಾರಿ, ಬಾರ್ಪೆಟಾ, ಬೊಂಗೈಗಾಂವ್, ಕೊಕ್ರಜಾರ್, ಧುಬ್ರಿ, ದಕ್ಷಿಣ ಸಲ್ಮಾರಾ, ಗೋಲ್ಪಾರ ಮತ್ತು ಕಮ್ರೂಪ್ ಸೇರಿವೆ. ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ರಾಜ್ಯದಲ್ಲಿ 23ಕ್ಕೂ ಹೆಚ್ಚು ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿವೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ನಿರಂತರ ಮಳೆಯಿಂದ ಉಂಟಾದ ಪ್ರವಾಹದಿಂದ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 99 ಗ್ರಾಮ ಹಾನಿಗೀಡಾಗಿವೆ.
ನಿರಂತರ ಮಳೆ ಹಾಗೂ ಬ್ರಹ್ಮಪುತ್ರ ನದಿ ನೀರಿನ ಮಟ್ಟದ ಏರಿಕೆಯ ಪರಿಣಾಮ ಉಂಟಾದ ಪ್ರವಾಹದಿಂದಾಗಿ ಸುಮಾರು 25 ಸಾವಿರ ಜನ ಸಮಸ್ಯೆಗೆ ಸಿಲುಕಿದ್ದಾರೆ ಎಂದು ದಿಬ್ರುಗರ್ ಜಿಲ್ಲಾಧಿಕಾರಿ ಪಲ್ಲವ್ ಗೋಪಾಲ್ ಈ ಹಿಂದೆ ಮಾಹಿತಿ ನೀಡಿದ್ದರು. ನಿರಂತರ ಮಳೆಯ ಪರಿಣಾಮ ದಿಬ್ರುಗರ್ ನಗರವು ಕಳೆದ ನಾಲ್ಕು ದಿನಗಳಿಂದ ನೀರಿನಲ್ಲಿದೆ. ಅಲ್ಲದೇ 1,289 ಗ್ರಾಮಗಳು ಮುಳುಗಿದ್ದು ಮತ್ತು 37,313.46 ಹೆಕ್ಟೇರ್ ಬೆಳೆ ಪ್ರದೇಶ ಹಾನಿಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.