ಗುವಾಹಟಿ: ಅಸ್ಸೋಂನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಪ್ರವಾಹ ಪರಿಸ್ಥಿತಿ ತಂದಿಟ್ಟಿದ್ದು, ಸುಮಾರು ಎರಡೂವರೆ ಲಕ್ಷ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ವಿಶ್ವ ಪಾರಂಪರಿಕ ತಾಣವಾಗಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಅರ್ಧಕ್ಕರ್ಧ ಮುಳುಗಿದೆ.
ಕಳೆದೊಂದು ತಿಂಗಳಿನಿಂದ ರಾಜ್ಯ ಭೂ ಕುಸಿತ, ಪ್ರವಾಹಕ್ಕೆ ತುತ್ತಾಗಿದ್ದು, 16ಕ್ಕೂ ಹೆಚ್ಚು ಜಿಲ್ಲೆಗಳ 706 ಗ್ರಾಮಗಳು ತತ್ತರಿಸಿ ಹೋಗಿವೆ. ಪ್ರವಾಹಕ್ಕೆ ಈವರೆಗೆ 16 ಮಂದಿ ಮೃತಪಟ್ಟಿದ್ದರೆ, ಭೂ ಕುಸಿತದಿಂದಾಗಿ 21 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.
142 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 18,000 ಜನರಿಗೆ ಆಶ್ರಯ ನೀಡಲಾಗುತ್ತಿದೆ. ಬ್ರಹ್ಮಪುತ್ರ, ಡಿಖೋವ್, ಜಿಯಾಭರಲಿ ಮತ್ತು ಧನ್ಸಿರಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸುತ್ತಲಿನ ಗ್ರಾಮಗಳ ಜನರನ್ನು ಸ್ಥಳಾಂತರ ಮಾಡಲಾಗಿದೆ.
ಮುಳುಗಡೆಯತ್ತ ಕಾಜಿರಂಗ ಪಾರ್ಕ್:
ವಿಶ್ವ ಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಶೇ. 50ರಷ್ಟು ಭಾಗ ಪ್ರವಾಹದ ನೀರಿನಿಂದ ಮುಳುಗಿದೆ. ಇಲ್ಲಿನ ಸುಮಾರು 12,000 ಹೆಕ್ಟೇರ್ ಕೃಷಿ ಭೂಮಿಯನ್ನೂ ಕೂಡ ನೀರು ಆವರಿಸಿದೆ. ಉದ್ಯಾನದೊಳಗಿದ್ದ ಕನಿಷ್ಠ 70 ಕ್ಯಾಂಪ್ಗಳು ಮುಳುಗಿದ್ದು, ಪ್ರಾಣಿಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಪ್ರವಾಹದ ನೀರು ಪೊಬಿಟೋರಾ ವನ್ಯಜೀವಿ ಅಭಯಾರಣ್ಯಕ್ಕೂ ನುಗ್ಗಿದ್ದು, 100ಕ್ಕೂ ಹೆಚ್ಚು ಖಡ್ಗಮೃಗಗಳು (ಘೇಂಡಾಮೃಗ), 1,500 ಕಾಡೆಮ್ಮೆಗಳು ಮತ್ತು ಇತರ ಪ್ರಾಣಿಗಳನ್ನು ಸಹ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.