ಗುವಾಹಟಿ: ಅಸ್ಸೋಂನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಪ್ರವಾಹ ಪರಿಸ್ಥಿತಿ ತಂದಿಟ್ಟಿದೆ. ಬರೋಬ್ಬರಿ 36 ಲಕ್ಷ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಶುಕ್ರವಾರ ಮತ್ತೆ ಐವರು ಮೃತಪಟ್ಟಿದ್ದು, ರಾಜ್ಯದಲ್ಲಿ ಮಳೆ ಸಂಬಂಧಿತ ಅವಘಡಗಳಿಗೆ ಬಲಿಯಾದವರ ಸಂಖ್ಯೆ 102ಕ್ಕೆ ಏರಿಕೆಯಾಗಿದೆ.
ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯವು ಭೂ ಕುಸಿತ, ಪ್ರವಾಹಕ್ಕೆ ತುತ್ತಾಗಿದ್ದು, 28ಕ್ಕೂ ಹೆಚ್ಚು ಜಿಲ್ಲೆಗಳ 3,014 ಗ್ರಾಮಗಳು ತತ್ತರಿಸಿ ಹೋಗಿವೆ. ಪ್ರವಾಹಕ್ಕೆ ಈವರೆಗೆ ರಾಜ್ಯದಲ್ಲಿ ಒಟ್ಟಾರೆ 102 ಜನ ಮೃತಪಟ್ಟಿದ್ದಾರೆ. ಪ್ರವಾಹಕ್ಕೆ 76 ಮಂದಿ ಬಲಿಯಾಗಿದ್ದರೆ, ಭೂ ಕುಸಿತದಿಂದಾಗಿ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ. 36 ಲಕ್ಷ ಪ್ರವಾಹ ಪೀಡಿತ ಜನರ ಪೈಕಿ ಸುಮಾರು 22 ಲಕ್ಷ ಜನರು ನಾಲ್ಕು ಜಿಲ್ಲೆಗಳಲ್ಲಿದ್ದಾರೆ - ಧುಬ್ರಿ (8,92,109), ಗೋಲ್ಪಾರ (4,43,768), ಬಾರ್ಪೆಟಾ (4,29,708) ಮತ್ತು ಮೊರಿಗಾಂವ್ (4,24,541) ಎಂದು ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಮಾಹಿತಿ ನೀಡಿದೆ.
2,200 ಕ್ಕೂ ಹೆಚ್ಚು ಖಡ್ಗಮೃಗಗಳಿರುವ ವಿಶ್ವ ಪ್ರಸಿದ್ಧ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಶೇ.95 ರಷ್ಟು ಮುಳುಗಡೆಯಾಗಿದ್ದು, 86 ಪ್ರಾಣಿಗಳು ಸಾವನ್ನಪ್ಪಿವೆ. 125 ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದು ಅರಣ್ಯ ಇಲಾಖೆ ಮತ್ತು ಎಎಸ್‌ಡಿಎಂಎ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಹ್ಮಪುತ್ರ, ಧನ್ಸಿರಿ, ಜಿಯಾಭರಲಿ, ಕೋಪಿಲಿ, ಬೆಕಿ, ಬರಾಕ್ ಮತ್ತು ಕುಶಿಯಾರಾ ಈ ಆರು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸುತ್ತಲಿನ 12 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿನ ಜನರನ್ನು ಸ್ಥಳಾಂತರ ಮಾಡಲಾಗಿದೆ. 28 ಜಿಲ್ಲೆಗಳಲ್ಲಿ 711 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 51,500 ಜನರಿಗೆ ಆಶ್ರಯ ನೀಡಲಾಗುತ್ತಿದೆ.