ಗುವಾಹಟಿ (ಅಸ್ಸೋಂ): ಪಕ್ಷ ವಿರೋಧಿ ಚಟುಚಟಿಕೆಯಲ್ಲಿ ಭಾಗಿಯಾದ ಆರೋಪದಡಿ ಅಸ್ಸೋಂನ ಕಾಂಗ್ರೆಸ್ ಮಾಜಿ ಶಾಸಕಿ ರೂಮಿನಾಥ್ ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ರೂಮಿನಾಥ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಈ ನೋಟಿಸ್ಗೆ ಪ್ರತಿಕ್ರಿಯಿಸಿದ್ದ ಶಾಸಕಿಯ ಉತ್ತರ ತೃಪ್ತಿ ನೀಡದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ದೊರೆತಿದೆ.
ಅಸ್ಸೋಂ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಪ್ರಕಾರ, ನಾಥ್ ಅವರಿಗೆ ಆಗಸ್ಟ್ 21ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಅದರಲ್ಲಿ ಬಿಜೆಪಿಯೊಂದಿಗೆ ನಿಮ್ಮ ಚಟುವಟಿಕೆ ಗಮನಕ್ಕೆ ಬಂದಿದೆ. ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಲಾಗಿತ್ತು. ಬಳಿಕ ರೂಮಿನಾಥ್ ಈ ನೋಟಿಸ್ಗೆ ಆಗಸ್ಟ್ 28ರಂದು ಉತ್ತರಿಸಿದ್ದರು.
ಅಲ್ಲದೆ ಶೋಕಾಸ್ ನೋಟಿಸ್ಗೆ ನೀಡಿರುವ ಉತ್ತರ ತೃಪ್ತಿಕರವಾಗಿಲ್ಲ. ಆರೋಪಗಳನ್ನು ನಿರಾಕರಿಸಿರುವ ಅವರ ಉತ್ತರಗಳು ಕಾರ್ಯನಿಷ್ಠೆಯನ್ನು ದೃಢಪಡಿಸುತ್ತಿಲ್ಲ. ಈ ಹಿನ್ನೆಲೆ ಎಪಿಸಿಸಿ ಅಧ್ಯಕ್ಷ ರಿಪುನ್ ಬೋರಾ ಮಾಜಿ ಶಾಸಕಿ ರೂಮಿನಾಥ್ರನ್ನು ಉಚ್ಛಾಟನೆಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಪಕ್ಷ ತಿಳಿಸಿದೆ. ಇದಕ್ಕೂ ಮೊದಲು ಕಳೆದ ಶುಕ್ರವಾರ ಹಾಲಿ ಶಾಸಕ ರಣ್ದೀಪ್ ಗೌವಾಲರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಉಚ್ಛಾಟನೆ ಮಾಡಲಾಗಿತ್ತು.