ಅಸ್ಸೋಂ: ಏಷ್ಯಾದ ಅತ್ಯಂತ ಹಳೆಯ ಆನೆ ಅಸ್ಸೋಂನಲ್ಲಿ ಇದೆ. 86 ವರ್ಷದ ಈ ಆನೆಯು ಅಸ್ಸೋಂನ ಬಿಸ್ವಾನಾಥ್ ಜಿಲ್ಲೆಯ ಬೆಹಾಲಿ ಟೀ ಎಸ್ಟೇಟ್ನಲ್ಲಿದೆ. ಸುಮಾರು 52 ವರ್ಷಗಳ ಹಿಂದೆ ಈ ಆನೆಯನ್ನು ವಿಲಿಯಮ್ಸನ್ ಮ್ಯಾಗರ್ ಎಂಬ ಟೀ ಎಸ್ಟೇಟ್ ಮಾಲೀಕ ಖರೀದಿಸಿದ್ದ. ಆಗಿನ ಬ್ರಿಟಿಷ್ ಅಧಿಕಾರಿ ಜಾನ್ ಆಲಿವರ್ ಎಂಬುವರು ಆನೆಗೆ ಬಿಜುಲಿ ಪ್ರಸಾದ್ ಎಂದು ಹೆಸರಿಟ್ಟಿದ್ದರು.
ಇದೀಗ ಈ ಆನೆಯನ್ನು ಗಾರ್ಡನ್ ಮ್ಯಾನೇಜರ್ ಕುಲ್ಜೀತ್ ಬೋರಾ ಎಂಬುವರು ನೋಡಿಕೊಳ್ಳುತ್ತಾರೆ. ಪ್ರತಿ ತಿಂಗಳು ಆನೆಗೆ 40,000 ರಿಂದ 45,000 ರೂ. ಖರ್ಚು ಮಾಡಲಾಗುತ್ತಿದೆ. ಆನೆಗೆ ನಿಗದಿತ ಡಯಟ್ ಚಾರ್ಟ್ ಇದ್ದು, ಇದರಲ್ಲಿ 25 ಕೆಜಿ ಅಕ್ಕಿ, 25 ಕೆಜಿ ಮೆಕ್ಕೆ ಜೋಳ ಸೇರಿದಂತೆ ಇತ್ಯಾದಿ ದಿನಿಸುಗಳು ಸೇರಿವೆ.
ಆನೆಯನ್ನು ಪ್ರತಿ ವಾರ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಹಾಗೂ ಅದರ ತೂಕವನ್ನು ಸಹ ಪ್ರತಿ ವಾರ ಪರಿಶೀಲನೆ ಮಾಡಲಾಗುತ್ತದೆ. ಪ್ರಸ್ತುತ ಬಿಜುಲಿ ಪ್ರಸಾದ್ ಆನೆಯು 4,000 ಕೆ.ಜಿ ತೂಕ ಹೊಂದಿದೆ.
ಆನೆಯ ವೈದ್ಯಕೀಯ ವರದಿಯನ್ನು ಕೋಲ್ಕತ್ತಾದ ವಿಲಿಯಮ್ಸನ್ ಮಾಗೋರ್ ಕೇಂದ್ರ ಕಚೇರಿಗೆ ಕಳುಹಿಸಿ ಕೊಡಲಾಗುತ್ತದೆ. ಅಲ್ಲಿನ ಯಾವುದೇ ಸಿಬ್ಬಂದಿಯ ಜೊತೆ ಆನೆಯು ಯಾವುದೇ ರೀತಿಯಲ್ಲಿ ಆಕ್ರಮಣಕಾರಿಯಾಗಿ ನಡೆದುಕೊಂಡಿಲ್ಲ. ಎಲ್ಲರೊಂದಿಗೂ ಅದು ಮನೆ ಸದಸ್ಯನಂತೆ ಇದೆ.
ಏಷ್ಯಾದ ಅತ್ಯಂತ ಹಳೆಯ ಆನೆ ಎಂದು ಗುರುತಿಸಲ್ಪಡುವ ಬಿಜುಲಿ ಪ್ರಸಾದ್, ಇಡೀ ಅಸ್ಸೋಂಗೆ ಕೀರ್ತಿ ತಂದಿದೆ. ಬಿಜುಲಿ ಪ್ರಸಾದ್ ದೀರ್ಘಕಾಲ ಬದುಕಲಿ ಎಂಬುದೇ ನಮ್ಮ ಆಶಯ..