ನವದೆಹಲಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಕತ್ತಲು ಆವರಿಸಿದ್ದು, ವಿಕ್ರಮ್ ಲ್ಯಾಂಡರ್ ಸಂಪರ್ಕ ಮರುಸ್ಥಾಪಿಸಲು ಇಸ್ರೋ ನಡೆಸಿದ ಪ್ರಯತ್ನಗಳೆಲ್ಲೂ ವಿಫಲವಾಗಿದೆ. ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಶಾಶ್ವತವಾಗಿ ಸಂಪರ್ಕದಿಂದ ದೂರ ಉಳಿಯಲಿದೆ.
ಜುಲೈ 22ರ ಮಧ್ಯಾಹ್ನ ಆಂಧ್ರ ಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಜಿಗಿದಿದ್ದ ಚಂದ್ರಯಾನ-2 ರಾಕೆಟ್ ಸೆಪ್ಟೆಂಬರ್ 2ರಂದು ಚಂದ್ರನ ಕಕ್ಷೆ ಸೇರಿತ್ತು.
ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತ: ರಾಷ್ಟ್ರಮಟ್ಟದ ತಜ್ಞರಿಂದ ಸಮಸ್ಯೆ ವಿಶ್ಲೇಷಣೆ
ಯೋಜನೆಯಂತೆ ಸೆಪ್ಟೆಂಬರ್ 7ರ ನಸುಕಿನ ಜಾವ ರೋವರ್ ಒಳಗೊಂಡ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಗಬೇಕಿತ್ತು.
ಆದರೆ ಲ್ಯಾಂಡಿಂಗ್ಗೂ ಕೆಲ ಕ್ಷಣಗಳ ಮುನ್ನ ಲ್ಯಾಂಡರ್ ಸಂಪರ್ಕ ಕಡಿತವಾಗಿತ್ತು. ಯೋಜನೆಯ ಕೊನೆಯ ಹಾಗೂ ಮಹತ್ವದ ಹಂತದಲ್ಲಿ ನಡೆದ ಈ ಬೆಳವಣಿಗೆ ಇಸ್ರೋ ವಿಜ್ಞಾನಿ ಬಳಗಕ್ಕೆ ದೊಡ್ಡ ನಿರಾಸೆ ಮೂಡಿಸಿತ್ತು. ಇಷ್ಟಾದರೂ ಛಲ ಬಿಡದ ವಿಜ್ಞಾನಿಗಳು ಸಂಪರ್ಕ ಮರುಸ್ಥಾಪಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಆದರೆ ಕಳೆದ ಹದಿನಾಲ್ಕು ದಿನದ ಸತತ ಪ್ರಯತ್ನ ಕೈಗೂಡಲೇ ಇಲ್ಲ.
ಅಚ್ಚರಿ..! ಚಂದ್ರಯಾನ 2ರ ಬಗ್ಗೆ ನಮಗಿಂತ ಹೆಚ್ಚು ಗೂಗಲ್ ಮಾಡಿದ್ದು ಪಾಕಿಗಳು..!
ಆರ್ಬಿಟರ್ ಚಿತ್ರದಿಂದ ಮೂಡಿದ ಆಶಾವಾದ:
ಚಂದ್ರಯಾನ-2ರ ಆರ್ಬಿಟರ್ ಮುಂದಿನ ಏಳು ವರ್ಷಗಳ ಕಾಲ ಚಂದ್ರ ಸುತ್ತ ಸುತ್ತಲಿದ್ದು ಸಾಕಷ್ಟು ಅಂಶಗಳನ್ನು ಭೂಮಿಗೆ ರವಾನಿಸಲಿದೆ. ಇದೇ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಇರುವ ಜಾಗದ ಚಿತ್ರವನ್ನು ಕಳುಹಿಸಿತ್ತು.
ಆರ್ಬಿಟರ್ ಕಳುಹಿಸಿದ ಥರ್ಮಲ್ ಫೋಟೋದಿಂದ ಇಸ್ರೋ ತಂಡದಲ್ಲಿ ಆಶಾವಾದ ಮೂಡಿತ್ತು. ಸಾಫ್ಟ್ ಲ್ಯಾಂಡಿಂಗ್ ಆಗಿಲ್ಲ ಎನ್ನುವುದು ಚಿತ್ರದಿಂದ ವಿಜ್ಞಾನಿಗಳಿಗೆ ಸ್ಪಷ್ಟವಾಗಿತ್ತು. ಲ್ಯಾಂಡಿಂಗ್ ಸಂದರ್ಭದಲ್ಲಿ ಲ್ಯಾಂಡರ್ಗೆ ಭಾರಿ ಪ್ರಮಾಣದ ಹಾನಿಯೂ ಸಂಭವಿಸಿಲ್ಲ ಎನ್ನುವುದೂ ಆರ್ಬಿಟರ್ ಕಳುಹಿಸಿದ ಚಿತ್ರದಿಂದ ತಿಳಿದು ಬಂದಿತ್ತು.
ಫಲ ನೀಡದ ನಾಸಾ ಪ್ರಯತ್ನ:
ವಿಕ್ರಮ್ ಲ್ಯಾಂಡರ್ ಪ್ರಸ್ತು ಸ್ಥಿತಿಯ ಬಗ್ಗೆ ಹೆಚ್ಚು ತಿಳಿದು ಕೊಳ್ಳಲು ಲ್ಯಾಂಡರ್ ಇರುವ ಸಮೀಪದಲ್ಲೇ ಹಾದಹೋದ ನಾಸಾದ ಆರ್ಬಿಟರ್ ಸಹಾಯವನ್ನು ಇಸ್ರೋ ಪಡೆದಿತ್ತು.
ನಾಸಾ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಸಮೀಪದಲ್ಲಿ ಸಾಗುವ ವೇಳೆ ಸಂಜೆಯಾದ್ದರಿಂದ ಚಿತ್ರಗಳು ಅಷ್ಟೊಂದು ಸ್ಪಷ್ಟವಾಗಿಲ್ಲ ಎನ್ನಲಾಗಿದೆ. ಚಿತ್ರಗಳನ್ನು ಪರಿಶೀಲನೆ ಮಾಡುವುದಾಗಿ ನಾಸಾ ಹೇಳಿದ್ದರೂ ಡೆಡ್ಲೈನ್ ಮುಕ್ತಾಯವಾದ ಕಾರಣ ನಾಸಾದ ಸಹಾಯ ಸಹ ಫಲ ನೀಡಿಲ್ಲ.
ಚಂದ್ರನಲ್ಲಿ ಹಗಲು ಮುಕ್ತಾಯ, ರಾತ್ರಿ ಆರಂಭ:
ಲ್ಯಾಂಡರ್ ಹಾಗೂ ರೋವರ್ ಕಾರ್ಯಾವಧಿ ಚಂದ್ರನ ಒಂದು ದಿನ ಅಂದರೆ ಭೂಮಿಯ ಹದಿನಾಲ್ಕು ದಿನ. ಸದ್ಯ ಈ ಅವಧಿ ಶುಕ್ರವಾರಕ್ಕೆ ಮುಕ್ತಾಯವಾಗಿದ್ದು, ಇಂದಿನಿಂದ ಚಂದ್ರನಲ್ಲಿ ಕತ್ತಲು ಕವಿದಿದೆ.
ಈ ಹದಿನಾಲ್ಕು ದಿನದಲ್ಲಿ ರೋವರ್ ಅರ್ಧ ಕಿ.ಮೀ ಕ್ರಮಿಸಿ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಅಧ್ಯಯನ ನಡೆಸಬೇಕಿತ್ತು. ಲ್ಯಾಂಡರ್ ಸಂಪರ್ಕ ಕಡಿತ ಮಾತ್ರವಲ್ಲದೆ ಸಾಫ್ಟ್ ಲ್ಯಾಂಡಿಂಗ್ ಸಹ ಸಾಧ್ಯವಾಗದ ಕಾರಣ ಎಲ್ಲವೂ ಉಲ್ಟಾ ಹೊಡೆದಿದೆ.
ಆರ್ಬಿಟರ್ ಆಯಸ್ಸು ಏಳು ವರ್ಷ..!
ಈಗಾಗಲೇ ತನ್ನ ಕಾರ್ಯ ಆರಂಭಿಸಿರುವ ಆರ್ಬಿಟರ್ ಮುಂದಿನ ಏಳು ವರ್ಷಗಳ ಕಾಲ ಚಂದ್ರನ ಅಧ್ಯಯನಕ್ಕೆ ಪೂರಕ ಅಂಶಗಳನ್ನು ಕಾಲ ಕಾಲಕ್ಕೆ ಭೂಮಿಗೆ ರವಾನಿಸಲಿದೆ. ಹೀಗಾಗಿ ಚಂದ್ರಯಾನ -2 ಶೇ.95ರಷ್ಟು ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ.
ಶೆ. 95ರಷ್ಟು ಯಶಸ್ಸು ಸಾಧಿಸಿದ್ದೇವೆ: ಇಸ್ರೋ ಮೊದಲ ಪ್ರತಿಕ್ರಿಯೆ
ಮುಂದೇನು..?
ಚಂದ್ರನದಲ್ಲಿ ಇಂದಿನಿಂದ ಕತ್ತಲು ಆರಂಭವಾಗಿದ್ದು, ಈ ವೇಳೆ ಉಷ್ಣಾಂಶ -200 ಡಿಗ್ರಿ ದಾಟಲಿದೆ. ಈ ಪರಿಯ ಚಳಿಯಲ್ಲಿ ಲ್ಯಾಂಡರ್ ಹಾಗೂ ರೋವರ್ ಸಂಪೂರ್ಣ ನಿಷ್ಕ್ರಿಯಗೊಳ್ಳಲಿದೆ. ಚಳಿಯಲ್ಲಿ ಕೆಲಸ ನಿರ್ವಹಿಸುವಂತೆ ಲ್ಯಾಂಡರ್ ಹಾಗೂ ರೋವರ್ ವಿನ್ಯಾಸಗೊಳಿಸಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಭಾರತೀಯರ ಕನಸು, ಭರವಸೆಯನ್ನು ಹೊತ್ತೊಯ್ಯುವ ಕಾರ್ಯ ಮುಂದುವರೆಯಲಿದೆ: ಇಸ್ರೋ
ಸಂಪರ್ಕ ಹೊಂದಿದ್ದರೂ ಅಥವಾ ಸಂಪರ್ಕ ಇಲ್ಲದಿದ್ದರೂ ವಿಜ್ಞಾನಿಗಳ ಬಳಿ ಇದ್ದಿದ್ದು, ಹದಿನಾಲ್ಕು ದಿನ ಅರ್ಥಾತ್ ಎರಡು ವಾರ ಮಾತ್ರ. ಹೀಗಾಗಿ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಶಾಶ್ವತವಾಗಿ ನಿದ್ರೆಗೆ ಜಾರಲಿವೆ.