ಹೈದರಾಬಾದ್: ಕೋವಿಡ್-19 ಬಿಕ್ಕಟ್ಟಿನ ಕಾರಣದಿಂದ 2020 ರ ಮೊದಲಾರ್ಧದಲ್ಲಿ ವಿಶ್ವ ಉದ್ಯೋಗ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಈ ಮುನ್ನ ಅಂದಾಜು ಮಾಡಿರುವುದಕ್ಕಿಂತಲೂ ಎಷ್ಟೋ ಪಾಲು ಹೆಚ್ಚು ಮಾನವ ಕೆಲಸದ ದಿನಗಳು ಈ ಮೊದಲಾರ್ಧದಲ್ಲಿ ಹಾಳಾಗಿದ್ದು, ಉದ್ಯೋಗ ಮಾರುಕಟ್ಟೆಯ ಅನಿಶ್ಚಿತತೆಯು ದ್ವಿತೀಯಾರ್ಧದಲ್ಲೂ ಮುಂದುವರಿಯಲಿದ್ದು, ಕೋವಿಡ್ ಮುಂಚೆ ಇದ್ದ ಸ್ಥಿತಿ ಸದ್ಯಕ್ಕೆ ಮರಳುವ ಸಾಧ್ಯತೆಗಳಿಲ್ಲ. ಬರುವ ದಿನಗಳಲ್ಲಿ ಬೃಹತ್ ಪ್ರಮಾಣದಲ್ಲಿ ಉದ್ಯೋಗವಕಾಶಗಳು ಕಡಿತವಾಗುವ ಆತಂಕ ಇನ್ನೂ ಇದೆ ಎಂದು ವಿಶ್ವ ಕಾರ್ಮಿಕ ಸಂಸ್ಥೆಯ ಇತ್ತೀಚಿನ ಸಮೀಕ್ಷಾ ವರದಿ ಹೇಳಿದೆ.
ವಿಶ್ವಾದ್ಯಂತ ಕಡಿತಗೊಂಡ ಉದ್ಯೋಗಗಳ ಅಂಕಿ ಸಂಖ್ಯೆ ಹೀಗಿದೆ:
2020ರ ಎರಡನೇ ತ್ರೈಮಾಸಿಕದಲ್ಲಿ ಜಗತ್ತಿನಾದ್ಯಂತ ಶೇ 14 ರಷ್ಟು ಮಾನವ ಉದ್ಯೋಗ ಗಂಟೆಗಳು ಹಾಳಾಗಿವೆ. ಇದು 400 ಮಿಲಿಯನ್ ಪೂರ್ಣಾವಧಿ ಕೆಲಸದ ದಿನಗಳಿಗೆ ಸಮನಾಗಿದೆ (ವಾರಕ್ಕೆ 48 ಗಂಟೆಗಳ ಕೆಲಸದ ಮಾನದಂಡವನ್ನು ಆಧರಿಸಿ). ಮೇ 27 ರಂದು ಅಂದಾಜು ಮಾಡಿದ್ದ ಶೇ 10.7 ಕ್ಕಿಂತ (305 ಮಿಲಿಯನ್ ಉದ್ಯೋಗಗಳು) ಈ ಪ್ರಮಾಣ ಅತಿ ಹೆಚ್ಚಾಗಿದೆ.
2020ರ ದ್ವಿತೀಯಾರ್ಧದಲ್ಲಿ ಏನಾಗಬಹುದು?
2020ರ ದ್ವಿತೀಯಾರ್ಧದಲ್ಲಿ ಉದ್ಯೋಗ ಮಾರುಕಟ್ಟೆಯ ಚೇತರಿಕೆ ಮೂರು ಅಂಶಗಳನ್ನು ಅವಲಂಬಿಸಿದೆ: ಮೂಲಾಧಾರ, ನಿರಾಶಾವಾದ ಹಾಗೂ ಆಶಾವಾದ. ದೀರ್ಘಾವಧಿಯಲ್ಲಿ ಉದ್ಯೋಗ ಮಾರುಕಟ್ಟೆಯ ಚೇತರಿಕೆಯು ಕೋವಿಡ್ ಪರಿಣಾಮ ಹಾಗೂ ಆಯಾ ದೇಶಗಳಲ್ಲಿನ ಸರ್ಕಾರಗಳ ನೀತಿಗಳನ್ನು ಕೂಡ ಬಹುವಾಗಿ ಅವಲಂಬಿಸಿರುತ್ತದೆ.
ಮೂಲಾಧಾರ ಮಾದರಿ: ಈಗಿನ ಅಂದಾಜಿನಂತೆ ಆರ್ಥಿಕ ಚಟುವಟಿಕೆಗಳು ಆರಂಭವಾದಲ್ಲಿ ಹಾಗೂ ಕೆಲಸದ ಸ್ಥಳದಲ್ಲಿನ ನಿರ್ಬಂಧಗಳು ತೆರವಾದಲ್ಲಿ, 2019ರ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 4.9 ರಷ್ಟು ಉದ್ಯೋಗಗಳು ಕಡಿತವಾಗಬಹುದು.
ನಿರಾಶಾವಾದ ಮಾದರಿ: ಕೋವಿಡ್ ಹರಡುವಿಕೆಯು ಎರಡನೇ ಹಂತಕ್ಕೆ ಪ್ರವೇಶಿಸಿ, ಕಟ್ಟುನಿಟ್ಟಾದ ನಿರ್ಬಂಧಗಳು ಮತ್ತೆ ಜಾರಿಯಾಗಬಹುದು. ಹೀಗಾದಲ್ಲಿ ಶೇ 11.9 ರಷ್ಟು ಮಾನವ ಉದ್ಯೋಗ ಗಂಟೆಗಳು ಕಡಿಮೆಯಾಗಬಹುದು.
ಆಶಾವಾದ ಮಾದರಿ: ವಿಶ್ವದ ಎಲ್ಲೆಡೆ ಮೊದಲಿನಂತೆ ಆರ್ಥಿಕ ಚಟುವಟಿಕೆಗಳು ಆರಂಭವಾಗಿ, ಉದ್ಯೋಗವಕಾಶಗಳು ಹೆಚ್ಚಲಿವೆ. ಈ ಅಂದಾಜು ಸತ್ಯವಾದಲ್ಲಿ ಕೇವಲ ಶೇ 1.2 ರಷ್ಟು ಮಾನವ ಉದ್ಯೋಗ ಗಂಟೆಗಳು ಕಡಿಮೆಯಾಗಲಿವೆ.
ಮಹಿಳಾ ಉದ್ಯೋಗಿಗಳ ಮೇಲಾಗುವ ಪರಿಣಾಮವೇನು?
ವೈರಸ್ ಬಿಕ್ಕಟ್ಟಿನಿಂದ ಪುರುಷರಿಗೆ ಹೋಲಿಸಿದರೆ ಮಹಿಳಾ ಉದ್ಯೋಗಿಗಳು ಹೆಚ್ಚು ಬಾಧಿತರಾಗಿದ್ದಾರೆ. ಕಳೆದೊಂದು ದಶಕದಲ್ಲಿ ಸಾಧಿಸಲಾಗಿದ್ದ ಲಿಂಗ ಸಮಾನತೆಯು ಕೋವಿಡ್ ಬಿಕ್ಕಟ್ಟಿನಿಂದ ಮಾಯವಾಗಿ, ಕೆಲಸದ ಸ್ಥಳಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಕಿರುಕುಳ ಹೆಚ್ಚಾಗಬಹುದು ಎಂದು ವಿಶ್ವ ಕಾರ್ಮಿಕ ಸಂಸ್ಥೆ ಅಂದಾಜು ಮಾಡಿದೆ.