ಕರಾಚಿ: ಭಾರತದ ಅವಿಭಾಜ್ಯ ಅಂಗ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ರದ್ದತಿ ವಿಚಾರಕ್ಕೆ ಸಂಬಂಧಿಸಿದಂತೆ ಗರಂ ಆಗಿದ್ದ ಪಾಕಿಸ್ತಾನ, ಈ ವಿಷಯವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಲು ಮುಂದಾಗಿತ್ತು. ಆದರೆ ಇದೀಗ ಆ ವಿಷಯ ಕೈ ಬಿಡುವ ಎಲ್ಲ ಲಕ್ಷಣ ಗೋಚರಿಸುತ್ತಿವೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಶಿ, ವಿಶ್ವಸಂಸ್ಥೆಯಲ್ಲಿ ಯಾರೂ ಸೋಲುವುದಕ್ಕೆ ಇಷ್ಟಪಡುವುದಿಲ್ಲ. ಇದೇ ವಿಷಯವನ್ನಿಟ್ಟುಕೊಂಡು ನಾವು ಮುಂದೆ ಹೋಗಬೇಕಾದರೆ ಸಾಕಷ್ಟು ಕಷ್ಟಪಡಬೇಕಾಗುತ್ತದೆ ಎಂದು ಹೇಳಿದ್ದು, ತಮ್ಮ ಕೈಯಿಂದ ಈ ಕೆಲಸ ಆಗುವುದಿಲ್ಲ ಎಂದಿದ್ದಾರೆ.
ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಾಕ್ಗೆ ಸಪೋರ್ಟ್ ಮಾಡಲು ಮುಂದಾಗಿದ್ದ ಚೀನಾ ಕೂಡ ಹಿಂದೇಟು ಹಾಕಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಬೆತ್ತಲಾಗುವುದರಿಂದ ತಪ್ಪಿಸಿಕೊಳ್ಳಲು ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ವಿರುದ್ಧ ಹೋರಾಡಲು ನಾವು ಒಂದಾಗಬೇಕು ಎಂದು ಶಾಹ್ ಮೊಹಮೂದ್ ಖುರೇಶ್ ಕರೆ ನೀಡಿದ್ದು, ಪಾಕ್ನ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೆಗೆದುಕೊಂಡಿರುವ ಈ ವಿಷಯದಲ್ಲಿ ದೇವರೇ ಅವರಿಗೆ ಶಿಕ್ಷೆ ನೀಡಲಿದ್ದಾನೆ ಎಂದು ಹೇಳಿದ್ದಾರೆ.
ಆರ್ಟಿಕಲ್ 370 ರದ್ದು ಮಾಡಿರುವ ಭಾರತ, ಜಮ್ಮು-ಕಾಶ್ಮೀರ ಹಾಗೂ ಲಡಾಖ್ಅನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಣೆ ಮಾಡಿದ್ದು, ಇನ್ಮುಂದೆ ಅಲ್ಲಿ ಕೂಡ ಕೇಂದ್ರದ ಕ್ರಮಗಳು ಜಾರಿಯಾಗಲಿವೆ.