ಶ್ರೀನಗರ: ಭಾರತೀಯ ಸೇನೆಯು ಶುಕ್ರವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಉಗ್ರನೋರ್ವ ಭದ್ರತಾ ಪಡೆಗಳ ಮುಂದೆ ಎಕೆ -47 ರೈಫಲ್‌ನೊಂದಿಗೆ ಶರಣಾಗಿದ್ದಾನೆ.
ಸೈನ್ಯವು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಸೈನಿಕರೊಬ್ಬರು ಉಗ್ರನನ್ನು ಶರಣಾಗುವಂತೆ ಹೇಳುತ್ತಾರೆ. ಉಗ್ರನು ತನ್ನ ಎರಡೂ ಕೈಗಳನ್ನು ಮೇಲೆತ್ತಿ ಸೈನಿಕನನ್ನು ಸಮೀಪಿಸುತ್ತಿರುವುದು ಕಂಡುಬರುತ್ತದೆ. ಉಗ್ರನಿಗೆ ಯಾವುದೇ ಹಾನಿ ಆಗುವುದಿಲ್ಲ ಎಂದು ಭರವಸೆ ನೀಡುತ್ತಿರುವುದು ಕಂಡುಬಂದಿದೆ.
"ನಿನಗೆ ಏನೂ ಆಗುವುದಿಲ್ಲ" ಎಂದು ಸೈನಿಕನು ವಿಡಿಯೋದಲ್ಲಿ ಹೇಳುತ್ತಿದ್ದಾರೆ. ಕೇವಲ ಪ್ಯಾಂಟ್ ಧರಿಸಿರುವ ಉಗ್ರ ದೀರ್ಘವಾಗಿ ಉಸಿರಾಡುವುದನ್ನು ದೃಶ್ಯದಲ್ಲಿ ಕಾಣಬಹುದು.
ಇದನ್ನು ಅನುಸರಿಸಿ ಯುವಕನ ಮಾವ ತನ್ನ ಸೋದರಳಿಯನನ್ನು ಉಳಿಸಿದ್ದಕ್ಕಾಗಿ ಭದ್ರತಾ ಪಡೆಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. "ಅವನನ್ನು ಮತ್ತೆ ಉಗ್ರರೊಂದಿಗೆ ಹೋಗಲು ಬಿಡಬೇಡಿ" ಎಂದು ಸೈನಿಕರನ್ನು ಕೋರುತ್ತಿದ್ದಾರೆ. ಮಾಹಿತಿಯ ಪ್ರಕಾರ ಶರಣಾದ ವ್ಯಕ್ತಿ ಇತ್ತೀಚೆಗೆ ಭಯೋತ್ಪಾದಕರ ಸಂಘಟನೆ ಸೇರಿಕೊಂಡಿದ್ದ ಎನ್ನಲಾಗಿದೆ.
"ಎಸ್‌ಪಿಒ ಅಧಿಕಾರಿಯ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದೇ ದಿನ ಜಹಾಂಗೀರ್ ಅಹ್ಮದ್ ಭಟ್ ನಾಪತ್ತೆಯಾಗಿದ್ದ. ಆತನಿಗೋಸ್ಕರ ಅವನ ಕುಟುಂಬ ಹುಡುಕಾಟ ನಡೆಸುತ್ತಿತ್ತು. ಶುಕ್ರವಾರ ಬೆಳಗ್ಗೆ ಜಂಟಿ ಕಾರ್ಯಾಚರಣೆಯಲ್ಲಿ ಆತನನ್ನು ಹಿಡಿದಿದ್ದಾರೆ. ಭಾರತೀಯ ಸೇನೆಯು ವ್ಯಕ್ತಿಯನ್ನು ಶರಣಾಗುವಂತೆ ಮನವೊಲಿಸುವ ಪ್ರಯತ್ನ ಮಾಡಿತು, ನಂತರ ವ್ಯಕ್ತಿ ಶರಣಾದ" ಎಂದು ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಭಾರತೀಯ ಸೇನೆಯು ಭಯೋತ್ಪಾದಕರ ನೇಮಕಾತಿಯನ್ನು ತಡೆಗಟ್ಟುವ ಪ್ರಯತ್ನಗಳನ್ನು ಮುಂದುವರೆಸಿದೆ ಮತ್ತು ಯುವಕರು ಭಯೋತ್ಪಾದನೆಗೆ ಸೇರ್ಪಡೆಗೊಂಡರೆ ಮರಳಿ ಬರಲು ಅವರಿಗಾಗಿ ಆಯ್ಕೆಗಳನ್ನು ಒದಗಿಸುತ್ತೇವೆ" ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
"ಇದು ಕೇಂದ್ರ ಪ್ರದೇಶದ ಅಪರೂಪದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಪ್ರತಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ಸೇನೆಯು ಯಾವಾಗಲೂ ವೃತ್ತಿಪರತೆಯನ್ನು ತೋರಿಸುತ್ತದೆ. ಈ ಘಟನೆಯು ಸೈನ್ಯದ ಕಾರ್ಯವಿಧಾನಕ್ಕೆ ಒಂದು ಸಣ್ಣ ಉದಾಹರಣೆಯಾಗಿದೆ" ಎಂದು ಸೇನೆಯ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.