ಚಾಂಗ್ಲಾಂಗ್ (ಅರುಣಾಚಲ ಪ್ರದೇಶ): ಭಾರತೀಯ ಸೇನೆ ಮತ್ತು ಅರುಣಾಚಲ ಪ್ರದೇಶದ ಪೊಲೀಸರು ಅರಣ್ಯದಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಚಾಂಗ್ಲಾಂಗ್ ಜಿಲ್ಲೆಯ ಮಿಯಾವೊ ಬುಮ್ ಮೀಸಲು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿರುವುದಾಗಿ ಸೇನೆಯ ಮೂಲಗಳು ತಿಳಿಸಿವೆ.
ಗುವಾಹಾಟಿಯ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಪಿ. ಕಾಂಗ್‌ಸಾಯ್ ಈ ಬಗ್ಗೆ ಮಾಹಿತಿ ನೀಡಿದ್ದು, ಮಿಯಾವೊ ಬುಮ್ ಪ್ರದೇಶದಲ್ಲಿ ಎರಡು ದಿನಗಳ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಶಸ್ತ್ರಸಜ್ಜಿತ ಎನ್‌ಎಸ್‌ಸಿಎನ್ (ಐಎಂ) ನೇತೃತ್ವದಲ್ಲಿ ಸೇನೆ ಮತ್ತು ಸ್ಥಳೀಯ ಪೊಲೀಸರು ಅರಣ್ಯ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ಸರ್ಚಿಂಗ್ ಆಪರೇಷನ್ ವೇಳೆ ನಮ್ಮ ತಂಡ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಹಾಗೂ ಇತರ ಸಾಮಗ್ರಿಗಳನ್ನು ವಶ ಪಡಿಸಿಕೊಂಡಿದೆ ಎಂದು ಹೇಳಿದ್ದಾರೆ.
ವಶ ಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳಲ್ಲಿ ಮೂರು ಮ್ಯಾಗ್ಜಿನ್ಸ್ ಸೇರಿ ಒಂದು ಎಕೆ-56 ರೈಫಲ್, 115 ಜೀವಂತ ಗುಂಡು, ಏಕ ಗುರಿಯ 22 ಪಿಸ್ತೂಲ್ ಸೇರಿವೆ. ಸೀಜ್ ಮಾಡಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಚಾಂಗ್ಲಾಂಗ್ ಜಿಲ್ಲಾಧಿಕಾರಿಗಳಿಗೆ ಒಪ್ಪಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.