ನವದೆಹಲಿ: ಭೂ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಗುರುವಾರ ತೇಜ್‌ಪುರ ಮೂಲದ 4 ಕಾರ್ಪ್ಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಗಡಿಯಲ್ಲಿರುವ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಭಾರತದ ಮಿಲಿಟರಿ ಸನ್ನದ್ಧತೆಯ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಅವರು, ಸೇನೆಯ ಹಿರಿಯ ಕಮಾಂಡರ್‌ಗಳೊಂದಿಗೆ ಸಂವಾದ ನಡೆಸಿದರು. ಪೂರ್ವ ಲಡಾಕ್‌ನಲ್ಲಿ ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಎಲ್‌ಎಸಿಯ ಉದ್ದಕ್ಕೂ "ಹೆಚ್ಚಿನ ಜಾಗರೂಕತೆ" ವಹಿಸುವಂತೆ ಸೇನಾಧಿಕಾರಿಗಳಿಗೆ ಭೂ ಸೇನಾ ಮುಖ್ಯಸ್ಥರು ಸೂಚನೆ ನೀಡಿದರು.
ಪೂರ್ವ ವಲಯದಲ್ಲಿ ಚೀನಾ ಗಡಿಯಲ್ಲಿರುವ ಪ್ರದೇಶಗಳಲ್ಲಿ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸುವ ಬಗ್ಗೆ ಈಸ್ಟರ್ನ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಜನರಲ್ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು ಜನರಲ್ ನರವಣೆ ಅವರಿಗೆ ಗಡಿಯಲ್ಲಿನ ಪರಿಸ್ಥಿತಿ, ಭಾರತ ಸೇನೆಯ ಸನ್ನದ್ಧತೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗಿನ ಗಡಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ಅರುಣಾಚಲ ಮತ್ತು ಸಿಕ್ಕಿಂ ಕ್ಷೇತ್ರಗಳನ್ನು ಒಳಗೊಂಡಂತೆ ಸುಮಾರು 3,500 ಕಿ.ಮೀ ಉದ್ದದ ಎಲ್‌ಎಸಿ ಉದ್ದಕ್ಕೂ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿ ಸೈನ್ಯ ನಿಯೋಜಿಸುವುದರತ್ತ ಭಾರತ ಸೇನೆ ಹೆಚ್ಚಿನ ಗಮನ ವಹಿಸಿದೆ. ಅರುಣಾಚಲ ವಲಯದಲ್ಲಿ ಎಲ್‌ಎಸಿ ಉದ್ದಕ್ಕೂ ಪ್ರಮುಖ ನೆಲೆಗಳಲ್ಲಿ ಭಾರತೀಯ ವಾಯುಪಡೆ ಹೆಚ್ಚುವರಿ ಫೈಟರ್ ಜೆಟ್‌ಗಳನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಲಖನೌದ ಸೆಂಟ್ರಲ್ ಕಮಾಂಡ್ ಕಚೇರಿಗೆ ಭೇಟಿ: ಜನರಲ್ ನರವಣೆ ಅವರು ಇಂದು ಲಖನೌದಲ್ಲಿನ ಸೆಂಟ್ರಲ್ ಕಮಾಂಡ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾರೆ. ಪೂರ್ವ ಲಡಾಖ್‌ನ ಘರ್ಷಣೆ ಸ್ಥಳಗಳಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಸಂಬಂಧ ಭಾರತ ಮತ್ತು ಚೀನಾ ಹಲವಾರು ಸುತ್ತಿನ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳನ್ನು ನಡೆಸಿವೆ. ಈ ಮಧ್ಯೆ ಭಾರತ ಗಡಿಯಲ್ಲಿ ಮುನ್ನೆಚ್ಚರಿಕೆ ವಹಿಸಲು ನಿರ್ಧರಿಸಿದೆ.