ಮಧುರೈ (ತಮಿಳುನಾಡು): ಮಾರಕಾಸ್ತ್ರಗಳನ್ನು ಹೊಂದಿದ ನಾಲ್ವರು ಆಸ್ಪತ್ರೆಗೆ ನುಗ್ಗಿ ಓರ್ವ ರೋಗಿಯನ್ನು ಕೊಂದಿರುವ ಬೆಚ್ಚಿಬೀಳಿಸುವ ಘಟನೆ ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಇಂದು ಬೆಳ್ಳಂ ಬೆಳಗ್ಗೆ ಈ ಘಟನೆ ನಡೆದಿದ್ದು, ಚಿಕಿತ್ಸೆ ಪಡೆಯುತ್ತಿದ್ದ ರೋಗಿ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ. ಆರೋಪಿಗಳ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವಿ.ಮುರುಗನ್ ಎಂಬಾತ ಕೊಲೆಗೀಡಾದ ವ್ಯಕ್ತಿಯಾಗಿದ್ದಾನೆ. ಈತ ವಾರ್ಡ್ ನಂಬರ್ 101ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದರು.
ಹಳೇ ದ್ವೇಷ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದ್ದು, ಸ್ಥಳಕ್ಕೆ ಡಿಸಿಪಿ ಇ.ಕಾರ್ತಿಕ್ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. 10 ಸಿಸಿಟಿವಿಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ