ಕ್ಯುಪರ್ಟಿನೋ: ಚೀನಾದಲ್ಲಿ ಕೊರೋನಾ ವೈರಸ್ ಹಬ್ಬಿರುವ ಹಿನ್ನೆಲೆ ಆ್ಯಪಲ್ ಐಫೋನ್ ಉತ್ಪಾದನೆ ಹಾಗೂ ಮಾರಾಟವನ್ನು ಕಡಿತಗೊಳಿಸಲಿದೆ ಎಂದು ಆ್ಯಪಲ್ ಕಂಪೆನಿ ತನ್ನ ಗ್ರಾಹಕರಿಗೆ ತಿಳಿಸಿದೆ.
ಕೊರೋನಾ ವೈರಸ್ ನಿಂದಾಗಿ ಚೀನಾ ಏಕಾಏಕಿ ಐಫೋನ್‌ಗಳ ಉತ್ಪಾದನೆಯನ್ನು ಕಡಿತಗೊಳಿಸಿದೆ. ಇದರಿಂದಾಗಿ ಆ್ಯಪಲ್ ತನ್ನ ಎರಡನೇ ತ್ರೈಮಾಸಿಕ ಹಣಕಾಸನ್ನು ಪೂರೈಸುವುದಿಲ್ಲ ಎಂದು ಹೂಡಿಕೆದಾರರಿಗೆ ಎಚ್ಚರಿಕೆ ನೀಡುತ್ತಿದೆ.
ತನ್ನ ಎಲ್ಲಾ ಐಫೋನ್ ಉತ್ಪಾದನಾ ಸೌಲಭ್ಯಗಳು ಚೀನಾದ ಹುಬೈ ಪ್ರಾಂತ್ಯದ ಹೊರಗಿದ್ದು, ಸ್ಥಗಿತಗೊಂಡ ಎಲ್ಲ ಉತ್ಪಾದಕ ಘಟನಕಗಳನ್ನು ಮತ್ತೆ ತೆರೆಯಲಾಗಿದೆ, ಆದರೆ ಉತ್ಪಾದನೆಯು ನಿಧಾನವಾಗಿ ಹೆಚ್ಚುತ್ತಿದೆ ಎಂದು ಕ್ಯಾಲಿಫೋರ್ನಿಯಾ ಮೂಲದ ಕಂಪನಿ ಹೇಳಿದೆ.
ಐಫೋನ್ ಉತ್ಪನ್ನಕ್ಕೆ ಸಹಾಯ ಮಾಡುವ ಪ್ರತಿಯೊಬ್ಬರ ಆರೋಗ್ಯ ಮತ್ತು ಯೋಗಕ್ಷೇಮವೇ ನಮ್ಮ ಪ್ರಮುಖ ಆದ್ಯತೆಯಾಗಿದೆ, ಹೀಗಾಗಿ ನಾವು ನಮ್ಮ ಪೂರೈಕೆದಾರರು ಮತ್ತು ಆರೋಗ್ಯ ಇಲಾಖಾ ತಜ್ಞರೊಂದಿಗೆ ನಿಕಟ ಸಮಾಲೋಚನೆಯಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದು ಆ್ಯಪಲ್ ಹೇಳಿಕೆಯಲ್ಲಿ ತಿಳಿಸಿದೆ.
ಯುಎಸ್ ಮತ್ತು ಯುರೋಪ್ ನಂತರ ಆ್ಯಪಲ್ ಐಫೋನ್ ಮಾರಾಟದಲ್ಲಿ ಮೂರನೇ ಅತೀ ದೊಡ್ಡ ಮಾರುಕಟ್ಟೆ ಹೊಂದಿದ್ದ ಚೀನಾದಲ್ಲಿ , ಐಫೋನ್‌ಗಳ ಬೇಡಿಕೆ ಕೂಡ ಕಡಿಮೆಯಾಗಿದೆ ಎಂದು ಆ್ಯಪಲ್ ಹೇಳಿದೆ, ಏಕೆಂದರೆ ಆ್ಯಪಲ್ ಮಾರಾಟ ಮಾಡುವ 42 ಅಂಗಡಿಗಳು ಮುಚ್ಚಲ್ಪಟ್ಟಿವೆ ಕೆಲವು ತಮ್ಮ ಕೆಲಸದ ಅವಧಿ ಕಡಿಮೆಗೊಳಿಸಿವೆ.
ಆದರೆ ಚೀನಾ ಹೊರತುಪಡಿಸಿ ಬೇರೆ ದೇಶಗಳಲ್ಲಿ ಆ್ಯಪಲ್ ಐಫೋನ್ ಬೇಡಿಕೆ ಪ್ರಬಲವಾಗಿದೆ ಎಂದು ಆ್ಯಪಲ್ ಕಂಪೆನಿ ತಿಳಿಸಿದೆ. ಜನವರಿ 28 ರಂದು, ಆ್ಯಪಲ್ ಎರಡನೇ ತ್ರೈಮಾಸಿಕ ಆದಾಯವನ್ನು 63 ಬಿಲಿಯನ್ ನಿಂದ 67 ಬಿಲಿಯನ್ ಎಂದು ನಿರೀಕ್ಷಿಸಿರುವುದಾಗಿ ಕಂಪೆನಿ ತಿಳಿಸಿದೆ. ಆ್ಯಪಲ್ ನ ಎರಡನೇ ತ್ರೈಮಾಸಿಕ ಮಾರ್ಚ್ 30 ಕ್ಕೆ ಕೊನೆಗೊಳ್ಳುತ್ತದೆ. ಈ ಬಗ್ಗೆ ಏಪ್ರಿಲ್ನಲ್ಲಿ ಹೆಚ್ಚಿನ ಮಾಹಿತಿ ಒದಗಿಸುವುದಾಗಿ ಆ್ಯಪಲ್ ಕಂಪೆನಿ ತಿಳಿಸಿದೆ.
ಕೊರೋನ ವೈರಸ್ (COVID-19) ನಿಂದ ಸಾವಿಗೀಡಾದವರ ಸಂಖ್ಯೆ 1,770 ಕ್ಕೆ ಏರಿದೆ.