ನವದೆಹಲಿ: ದೀಪಾವಳಿ ಆಚರಿಸಲು ಸಜ್ಜಾಗಿರುವ ರಾಷ್ಟ್ರ ರಾಜಧಾನಿಯ ಜನರಿಗೆ ದೊಡ್ಡ ಆತಂಕ ಎದುರಾಗಿದೆ. ಇಲ್ಲಿನ ಗಾಳಿಯ ಗುಣಮಟ್ಟ ಪಟಾಕಿ ಹಬ್ಬಕ್ಕೂ ಮುನ್ನವೇ ತೀರ ಕೆಳಮಟ್ಟಕ್ಕೆ ಕುಸಿದಿದೆ.
ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಾದ ಗುರುಗ್ರಾಮ್, ನೋಯ್ಡಾ, ಫರೀದಾಬಾದ್ ಹಾಗೂ ಗಾಜಿಯಾಬಾದ್ನಲ್ಲಿ ಎಓಕ್ಯೂ (AOQ-air quality index) ಗಾಳಿಯ ಗುಣಮಟ್ಟದ ಸೂಚ್ಯಂಕ "ತುಂಬಾ ಕಳಪೆ" ಹಂತಕ್ಕೆ ತಲುಪಿದೆ. ಹೊಗೆಯ ದಪ್ಪನೆಯ ಹೊದಿಕೆ ಆವರಿಸಿದಂತೆ ಗೋಚರಿಸುತ್ತಿದೆ. ಇಂದು ಬೆಳಗ್ಗೆ 8.30ರ ಹೊತ್ತಿಗೆ ದೆಹಲಿಯ ಒಟ್ಟು ಗಾಳಿಯ ಗುಣಮಟ್ಟದ ಸೂಚ್ಯಂಕ ಸುಮಾರು 309 ತಲುಪಿದ್ದು, ಇದು ಅತ್ಯಂತ ಅಪಾಯಕಾರಿ ವಾಯು ಪರಿಸ್ಥಿತಿಯಾಗಿದೆ.
ದೆಹಲಿಯ ನೆರೆಯ ರಾಜ್ಯಗಳಾದ ಪಂಜಾಬ್ ಹಾಗೂ ಹರಿಯಾಣದಲ್ಲಿ ಬೆಳೆಯ ಉಳಿಕೆ, ಜೊಳ್ಳು, ಹೊಟ್ಟುಗಳನ್ನು ಘನ ರೂಪದಲ್ಲಿ ಸುಟ್ಟಿರುವುದರಿಂದ ಹೊರ ಬಿದ್ದಿರುವ ದಟ್ಟ ಹೊಗೆಯೇ ಈ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣ ಎನ್ನಲಾಗ್ತಿದೆ.
ಗಾಳಿಯ ಗುಣಮಟ್ಟದ ಸೂಚ್ಯಂಕ:
0-50 ಎಓಕ್ಯೂ "ಉತ್ತಮ"
51-100 ಎಓಕ್ಯೂ "ಸಮಾಧಾನಕರ"
101-200 ಎಓಕ್ಯೂ "ಮಧ್ಯಮ"
201-300 ಎಓಕ್ಯೂ "ಕಳಪೆ"
301-400 ಎಓಕ್ಯೂ "ತುಂಬಾ ಕಳಪೆ"
401-500 ಎಓಕ್ಯೂ "ತೀವ್ರ ಕಳಪೆ"