ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ಮಾಡಲು ಕೇವಲ ಎರಡು ದಿನ ಬಾಕಿ ಇರುವಾಗಲೇ ಮತ್ತೋರ್ವ ಅರ್ಚಕರಲ್ಲಿ ಮಹಾಮಾರಿ ಕೊರೊನಾ ಕಾಣಿಸಿಕೊಂಡಿದೆ. ಇದು ಅಲ್ಲಿನ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ಕಳೆದ ಕೆಲ ದಿನಗಳ ಹಿಂದೆ ಶಿಲಾನ್ಯಾಸ ಕಾರ್ಯಕ್ರಮದ ಆಯೋಜನೆಯಲ್ಲಿ ತೊಡಗಿದ್ದ ಅರ್ಚಕ ಪ್ರದೀಪ್ ದಾಸ್ ಹಾಗೂ 16 ಭದ್ರತಾ ಸಿಬ್ಬಂದಿಗೆ ಸೋಂಕು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಆರ್ಚಕರಿಗೆ ಮಹಾಮಾರಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.
ಶಿಲಾನ್ಯಾಸಕ್ಕೂ ಮೊದಲೇ ಕೊರೊನಾ ಸಂಕಟ: ರಾಮ್ ಲಲ್ಲಾ ಅರ್ಚಕನಿಗೆ ಪಾಸಿಟಿವ್!
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ನಿಜಕ್ಕೂ ಇದು ಚಿಂತೆ ಮಾಡಬೇಕಾಗಿರುವ ವಿಷಯವಾಗಿದೆ. ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿದ್ದ ಪ್ರೇಮ್ ಕುಮಾರ್ ತಿವಾರಿ ಎಂಬುವವರಿಗೆ ಕೊರೊನಾ ಸೋಂಕು ತಗುಲಿದೆ ಎಂದಿದ್ದಾರೆ.
ಆಗಸ್ಟ್ 5ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆನೇಕರು ಭಾಗಿಯಾಗುತ್ತಿರುವ ಕಾರಣ ಇನ್ನಿಲ್ಲದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇದರ ಮಧ್ಯೆ ಕೂಡ ಅಲ್ಲಿನ ಅರ್ಚಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.