ಶ್ರೀನಗರ: 2020ರ ಜುಲೈ 18ರಂದು ಜಮ್ಮು-ಕಾಶ್ಮೀರದ ಶೋಪಿಯಾನ್ನಲ್ಲಿ ಹತರಾಗಿರುವುದು ಮೂವರು ಉಗ್ರರಲ್ಲ ಬದಲಿಗೆ ಸಾಮಾನ್ಯ ಕಾರ್ಮಿಕರು ಎಂಬ ಮಾತು ಕೇಳಿ ಬಂದಿರುವ ಕಾರಣ ಇದನ್ನ ಸ್ವತಂತ್ರ ತನಿಖೆಗೊಳಪಡಿಸುವಂತೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್ನ್ಯಾಶನಲ್(ಅಂತಾರಾಷ್ಟ್ರೀಯ ಸರ್ಕಾರೇತರ ಸಂಘಟನೆ) ಆಗ್ರಹಿಸಿದೆ.
ಶೋಪಿಯಾನ್ ಜಿಲ್ಲೆಯಲ್ಲಿ ಮೂವರು ಕಾರ್ಮಿಕರನ್ನ ಕಾನೂನು ಬಾಹಿರವಾಗಿ ಹತ ಮಾಡಲಾಗಿದೆ ಎಂದು ಪ್ರತಿಕ್ರಿಯೆ ನೀಡಿರುವ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ, ಕಾನೂನು ಬಾಹಿರ ಕೃತ್ಯಕ್ಕೆ ವಿಚಾರಣೆ ನಡೆಸುವ ಅವಶ್ಯಕತೆ ಇದೆ ಎಂದು ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಿರ್ದೇಶಕ ಅವಿನಾಶ್ ಕುಮಾರ್ ಪಾರದರ್ಶಕತೆ ಕಂಡುಕೊಳ್ಳಲು ಈ ತನಿಖೆ ಮಹತ್ವ ಪಡೆದುಕೊಂಡಿದೆ ಎಂದಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ಸ್ವತಂತ್ರವಾಗಿ ತನಿಖೆ ನಡೆಸುವ ಅವಶ್ಯಕತೆ ಇದೆ. ಸುಪ್ರೀಂಕೋರ್ಟ್ ಈಗಾಗಲೇ ಮಿಲಿಟರಿ ನ್ಯಾಯ ವ್ಯವಸ್ಥೆ ಟೀಕಿಸಿದೆ. ಈಗಾಗಲೇ ಭಾರತೀಯ ಮಿಲಿಟರಿ ನ್ಯಾಯ ವ್ಯವಸ್ಥೆಯಲ್ಲಿನ ಅಂತರ್ಗತ ದೋಷಗಳನ್ನ ಭಾರತದ ಮಿಲಿಟರಿ ಕಾನೂನು ತಜ್ಞರು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
ಏನಿದು ಪ್ರಕರಣ?
ಜುಲೈ 18,2020ರಂದು ದಕ್ಷಿಣ ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ಭಾರತೀಯ ಸೇನೆಯಿಂದ ಹತರಾಗಿದ್ದರು. ಆದರೆ ಇದರ ಬಗ್ಗೆ ಹೆಚ್ಚಿನ ವಿವರ ಹಂಚಿಕೊಳ್ಳಲು ಸೇನೆ ಹಿಂದೇಟು ಹಾಕಿತ್ತು. ಇದಾದ ಬಳಿಕ ಮೂವರು ಕಾರ್ಮಿಕರು ನಾಪತ್ತೆಯಾಗಿದ್ದರ ಬಗ್ಗೆ ರಾಜೌರಿ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ಆಗಸ್ಟ್ 6ರಂದು ದೂರು ದಾಖಲು ಮಾಡಿದ್ದರು.
ಆಗಸ್ಟ್ 19ರಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿ, ಶೋಪಿಯಾನ್ ಮೂಲಕ ಹೆಚ್ಚಿನ ಉಗ್ರರು ನುಸುಳುತ್ತಿದ್ದು, ಇದು ನಮ್ಮ ಸೈನಿಕರ ಗಮನಕ್ಕೆ ಬಂದಿದೆ ಎಂದು ಹೇಳಿದ್ದರು. ಜತೆಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದರು.