ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸಮ್ಮುಖದಲ್ಲಿ 'ವೃಕ್ಷರೋಪಣ್ ಅಭಿಯಾನ' ಪ್ರಾರಂಭಿಸಲಿದ್ದಾರೆ.
ಆರು ಪರಿಸರ ಉದ್ಯಾನಗಳು / ಪ್ರವಾಸೋದ್ಯಮ ತಾಣಗಳ ಕಾಮಗಾರಿಯನ್ನ ಅಮಿತ್ ಶಾ ಉದ್ಘಾಟಿಸಲಿದ್ದಾರೆ. 10 ಕಲ್ಲಿದ್ದಲು / ಲಿಗ್ನೈಟ್ ಹೊಂದಿರುವ ರಾಜ್ಯಗಳ 38 ಜಿಲ್ಲೆಗಳಲ್ಲಿ 130ಕ್ಕೂ ಹೆಚ್ಚು ಸ್ಥಳಗಳಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ನಡೆಯಲಿದೆ.
"ಎಲ್ಲ ಕಲ್ಲಿದ್ದಲು / ಲಿಗ್ನೈಟ್ ಪಿಎಸ್ಯುಗಳನ್ನು ಒಳಗೊಂಡ 'ವೃಕ್ಷರೋಪಣ್ ಅಭಿಯಾನ'ವನ್ನು ಕಲ್ಲಿದ್ದಲು ಸಚಿವಾಲಯವು ಆಯೋಜಿಸಲಿದೆ. ಈ ಸಮಯದಲ್ಲಿ ಗಣಿಗಳು, ಕಚೇರಿಗಳು, ಕಲ್ಲಿದ್ದಲು / ಲಿಗ್ನೈಟ್ ಪಿಎಸ್ಯುಗಳು ಹಾಗೂ ಇತರ ಸೂಕ್ತ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗಿಡ ನೆಡಲಾಗುವುದು. ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಿಡ ವಿತರಿಸುವ ಮೂಲಕ ಸಮಾಜದಲ್ಲಿ ತೋಟಗಾರಿಕೆ ಉತ್ತೇಜಿಸಲಾಗುವುದು"ಎಂದು ಗೃಹ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪರಿಸರ ಉದ್ಯಾನಗಳು / ಪ್ರವಾಸೋದ್ಯಮ ತಾಣಗಳು ಜನರಿಗೆ ಮನರಂಜನೆ, ಸಾಹಸ ಕ್ರೀಡೆ, ಜಲ ಕ್ರೀಡೆ, ಪಕ್ಷಿ ವೀಕ್ಷಣೆ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲಿದೆ ಎಂದು ಸಚಿವಾಲಯ ತಿಳಿಸಿದೆ.
"ಕಲ್ಲಿದ್ದಲು ಕ್ಷೇತ್ರ ಪ್ರಮುಖ ಒತ್ತಡದ ಪ್ರದೇಶವಾಗಿದ್ದು, ಗಣಿಗಾರಿಕೆ ನಡೆಯುವ ಸುತ್ತಮುಲ್ಲಿನ ಪ್ರದೇಶಗಳಲ್ಲಿ ತೋಟಗಳ ಮೂಲಕ ಹಸಿರು ಹೊದಿಕೆ ಹೆಚ್ಚಿಸಲಾಗುವುದು"ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.