ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 2.0 ಸರ್ಕಾರದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿತ್ತಸಚಿವರ ಗಾದಿಗೇರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಳೆದ ಅವಧಿಯಲ್ಲಿ ವಿತ್ತಸಚಿವರಾಗಿ ಕಾರ್ಯನಿರ್ವಹಿಸಿದ ಅರುಣ್ ಜೇಟ್ಲಿ ಅನಾರೋಗ್ಯದ ಕಾರಣ ಈ ಬಾರಿ ಖಾತೆ ನಿರ್ವಹಿಸಲು ಸಾಧ್ಯವಿಲ್ಲ ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೆ, ಈಗಾಗಲೆ ಬಿಜೆಪಿ ಪಾಳೆಯದಲ್ಲಿ ಚಾಣಕ್ಯ ಎಂದೇ ಗುರ್ತಿಸಿಕೊಂಡಿರುವ ಅಮಿತ್ ಶಾ ಅವರಿಗೇ ಹಣಕಾಸು ಖಾತೆ ನೀಡುವ ಸಾಧ್ಯತೆಯಿದೆ ಎನ್ನಲಾಗ್ತಿದೆ.
ಗಾಂಧಿನಗರ ಲೋಕಸಭೆ ಕ್ಷೇತ್ರದಿಂದ ಅತ್ಯಧಿಕ ಮತ ಗಳಿಸಿ, ಸಂಸತ್ತಿಗೆ ಆಯ್ಕೆಯಾಗಿರುವ ಅಮಿತ್ ಶಾ, ಇಂದು ರಾಜ್ಯಸಭೆಗೆ ರಾಜೀನಾಮೆ ನೀಡಿದ್ದಾರೆ. ಲೋಕಸಭೆಗೆ ವಿತ್ತ ಸಚಿವರಾಗಿಯೇ ಪದಾರ್ಪಣೆ ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ.
ಕಳೆದ ಬಾರಿ ಜಿಎಸ್ಟಿ, ನೋಟು ಅಮಾನ್ಯೀಕರಣದಂತಹ ಮಹತ್ವದ ಸನ್ನಿವೇಶಗಳಲ್ಲಿ ಜೇಟ್ಲಿ ವಿತ್ತ ಸಚಿವರಾಗಿ ಮಹತ್ವದ ಪಾತ್ರ ವಹಿಸಿದ್ದರು. ಈ ಬಾರಿ ಅವರ ಆರೋಗ್ಯ ತೀರ ಹದಗೆಟ್ಟಿರುವ ಕಾರಣ ಇಂತಹ ಜವಾಬ್ದಾರಿಯುತ ಖಾತೆ ನಿರ್ವಹಿಸಲಾಗುತ್ತಿಲ್ಲ ಎಂದು ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.