ಚೆನ್ನೈ: ಕೊರೊನಾ ವೈರಸ್ನಿಂದ ಹೊರಬರಲು ದೇಶವನ್ನು 21 ದಿನಗಳ ಲಾಕ್ಡೌನ್ ಮಾಡಿ ಆದೇಶಿಸಲಾಗಿದೆ. ಈ ಮಧ್ಯೆ ಜನಸಾಮಾನ್ಯರು ಅನೇಕ ರೀತಿಯಲ್ಲಿ ತೊಂದರೆ ಅನುಭವಿಸ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಸರಿಯಾದ ವಾಹನ ಸೌಲಭ್ಯವಿಲ್ಲದೇ ಜನರ ಪಡಿಪಾಟಲು ಹೇಳತೀರದಾಗಿದೆ.
ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ರಾಜೇಶ್ವರಿ ಎಂಬ ಮಹಿಳೆಗೆ ಕಳೆದ ತಿಂಗಳು ತಾ 29ರಂದು ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಹೆರಿಗೆ ಆಗಿದೆ. ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮೂರು ದಿನಗಳ ಬಳಿಕ ಡಿಸ್ಚಾರ್ಜ್ ಆಗಿ ಮನೆಗೆ ಹೋಗುವಂತೆ ವೈದ್ಯರು ತಿಳಿಸಿದ್ದಾರೆ. ಈ ವೇಳೆ, ಬೇರೆ ವಾಹನಗಳ ಸೌಲಭ್ಯವಿಲ್ಲದೇ ಆ್ಯಂಬುಲೆನ್ಸ್ ಮಾಡಿಕೊಂಡು ಮನೆಗೆ ಹೋಗಲು ನಿರ್ಧರಿಸಿದ್ದಾರೆ.
ಆ್ಯಂಬುಲೆನ್ಸ್ ಜವಾದುಮಲೈ ಎಂಬ ಪ್ರದೇಶದ ಬಳಿ ಬರುತ್ತಿದ್ದಂತೆ ಯಾವುದೇ ಕಾರಣಕ್ಕೂ ಮುಂದೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಚಾಲಕ ರಸ್ತೆಯಲ್ಲೇ ಆಕೆ ಹಾಗೂ ಸಂಬಂಧಿಕರನ್ನು ಅರ್ಧ ದಾರಿಯಲ್ಲೇ ಕೆಳಗಿಳಿಸಿದ್ದಾನೆ. ಇದರಿಂದ ಬೇರೆ ದಾರಿ ಕಾಣದೇ ಬಾಣಂತಿ, ನವಜಾತು ಶಿಶು ಹಾಗೂ ಕುಟುಂಬದ ಕೆಲ ಸದಸ್ಯರು 25 ಕಿಲೋ ಮೀಟರ್ ದೂರ ನಡೆದುಕೊಂಡೇ ಹೋಗಿ ಮನೆ ಸೇರಿದ್ದಾರೆ.
ಅಮಾನವೀಯವಾಗಿ ವರ್ತಿಸಿದ ಆ್ಯಂಬುಲೆನ್ಸ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.