ಶ್ರೀನಗರ: ಜಮ್ಮು ಕಾಶ್ಮೀರ ರಾಜ್ಯವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ನಂತರ ವಾಸ್ತವ ಸನ್ನಿವೇಶವನ್ನು ಅಳೆಯಲು ಜಮ್ಮು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿಗಾಗಿ ಬುಧವಾರ ಎರಡನೇ ಸುತ್ತಿನಲ್ಲಿ ಸುಮಾರು 25 ದೇಶಗಳ ರಾಯಭಾರಿಗಳು ಆಗಮಿಸಿದ್ದಾರೆ.
ಜರ್ಮನಿ, ಕೆನಡಾ, ಫ್ರಾನ್ಸ್, ಇಟಲಿ ಮತ್ತು ಪೋಲೆಂಡ್, ನ್ಯೂಜಿಲೆಂಡ್, ಮೆಕ್ಸಿಕೋ, ಅಫ್ಘಾನಿಸ್ತಾನ, ಆಸ್ಟ್ರಿಯಾ, ಉಜ್ಬೆಕಿಸ್ತಾನ ಮತ್ತು ಐರೋಪ್ಯ ಒಕ್ಕೂಟದ ರಾಯಭಾರಿಗಳು ಈ ತಂಡದಲ್ಲಿದ್ದಾರೆ. ಇವರು ಶ್ರೀನಗರ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ ಸುಮಾರು 11 ಗಂಟೆಗೆ ಆಗಮಿಸಿದ್ದಾರೆ. ಆದರೆ ಯೋಜನೆಯಂತೆ ಬಾರಾಮುಲ್ಲಾಗೆ ತೆರಳಲು ಅವರಿಗೆ ಸಾಧ್ಯವಾಗಲಿಲ್ಲ. ಹವಾಮಾನ ವಿಪರೀತ ಕೆಟ್ಟಿದ್ದರಿಂದಾಗಿ ಅವರ ಬಾರಾಮುಲ್ಲಾಗೆ ತೆರಳಲಿಲ್ಲ ಎಂದು ಅಧಿಖಾರಿಗಳು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
ಅಧಿಕಾರಿಗಳು ಹೇಳುವಂತೆ, ಇಲ್ಲಿನ ಬೋಲೆವಾರ್ಡ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ವಿವಿಧ ದೇಶಗಳ ರಾಯಭಾರಿಗಳು ಉಳಿದುಕೊಂಡಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ರಾಯಭಾರಿಗಳು ವೇಳಾಪಟ್ಟಿಯಲ್ಲೂ ಬದಲಾವಣೆಯಾಗಿದೆ. ಹೀಗಾಗಿ ಅವರನ್ನು ಶಿಕರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಜನಪ್ರಿಯ ದಾಲ್ ಸರೋವರದಲ್ಲಿ ಅವರು ಮೋಟಾರ್‌ಬೋಟ್ ರೈಡ್ ಮಾಡಿದರು.
ಸ್ಥಳೀಯ ಮಾಧ್ಯಮದ ಕೆಲವು ಪ್ರತಿನಿಧಿಗಳನ್ನೂ ರಾಯಭಾರಿಗಳು ಭೇಟಿ ಮಾಡಿದರು. ಸ್ಥಳೀಯ ಉದ್ಯಮಿಗಳು ಮತ್ತು ರಾಜಕೀಯ ನಾಯಕರ ಜೊತೆಗೆ ಊಟ ಮಾಡಿದರು ಎಂದು ಅಧಿಕಾರಿಗಳು ಹೇಳಿದರು. ಸೇನೆಯಿಂದ ಕಾಶ್ಮೀರದ ಸ್ಥಿತಿಗತಿಗಳ ವಿವರಗಳನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ಸ್ಥಳೀಯರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ನಿರೀಕ್ಷೆಯೂ ಇದೆ. ಸರ್ಕಾರದ ಸ್ಕಿಲ್ಡ್ ಸೊಸೈಟಿ ಪ್ರೋಗ್ರಾಮ್ ಅಡಿಯಲ್ಲಿ ತರಬೇತಿ ಪಡೆದ ಯುವಕರನ್ನು ಮಾತನಾಡಿಸುವ ಅವಕಾಶವನ್ನು ರಾಯಭಾರಿಗಳಿಗೆ ಒದಗಿಸಲಾಗುತ್ತದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಯಭಾರಿಗಳ ಭೇಟಿ ಹಾಗೂ ಇತರ ವಿವರಗಳ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು “ನಾಳೆ, ಅಂದರೆ ಗುರುವಾರ ರಾಯಭಾರಿಗಳ ತಂಡವು ಜಮ್ಮುಗೆ ತೆರಳಲಿದೆ. ಅಲ್ಲಿ ಅವರು ಲೆಫ್ಟಿನೆಂಟ್ ಗವರ್ನರ್ ಜಿಸಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಅಲ್ಲದೆ, ಹಲವು ಅಧಿಕಾರಿಗಳನ್ನೂ ಅವರು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.” ಎಂದಿದ್ದಾರೆ.
370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ವಾಸ್ತವ ಸ್ಥಿತಿಗತಿಯ ಚಿತ್ರಣವನ್ನು ಪಡೆಯುವ ಉದ್ದೇಶದಿಂದ ವಿವಿಧ ದೇಶಗಳ ರಾಯಭಾರಿಗಳು ಭೇಟಿ ನೀಡುತ್ತಿದ್ದಾರೆ. ಈ ಮಧ್ಯೆ, ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಇಲ್ಲದೇ ಇದ್ದಾಗ ಎದುರಿಸಿದ ಸಮಸ್ಯೆಗಳ ಬಗ್ಗೆ ಸ್ಥಳೀಯ ಮಾಧ್ಯಮದ ಪ್ರತಿನಿಧಿಗಳು ಅಳಲು ತೋಡಿಕೊಂಡಿದ್ದಾರೆ ಎಂದು ಭಾರತಕ್ಕೆ ಅಫ್ಘಾನಿಸ್ತಾನದ ರಾಯಭಾರಿ ತಹಿರ್ ಖಾದಿರಿ ಹೇಳಿದ್ದಾರೆ. ಇವರು ಕೂಡ 25 ಸದಸ್ಯರ ವಿದೇಶಿ ನಿಯೋಗದಲ್ಲಿ ಒಬ್ಬರಾಗಿದ್ದಾರೆ.
“ಕಾಶ್ಮೀರದ ಮಾಧ್ಯಮಗಳೊಂದಿಗೆ ನಾವು ಸಂವಹನ ನಡೆಸಿದ ವೇಳೆ ಸರ್ಕಾರವು ಇಂಟರ್ನೆಟ್ ಬ್ರಾಡ್‌ಬ್ಯಾಂಡ್ ಅನ್ನು ಸಕ್ರಿಯಗೊಳಿಸಬೇಕು ಎಂದು ಮಾಧ್ಯಮದ ಮಂದಿ ಗಂಭೀರವಾಗಿ ಆಗ್ರಹಿಸಿದ್ದಾರೆ. ಈ ಸಮಸ್ಯೆಯು ಅವರಿಗೆ ವರದಿ ಮಾಡಲು ಮತ್ತು ಸುದ್ದಿ ಪ್ರಸಾರಕ್ಕೆ ಗಂಭೀರ ಸಮಸ್ಯೆಯನ್ನು ಉಂಟು ಮಾಡ ಎಂದು ಖದಿರಿ ಟ್ವೀಟ್ ಮಾಡಿದ್ದಾರೆ.
https://twitter.com/tahirqadiry/status/1227548473957834753?s=19
ಕಾಶ್ಮೀರ ಜನರ ಆತಿಥ್ಯವನ್ನು ಅವರು ಮೆಚ್ಚಿಕೊಂಡಿದ್ದಾರೆ ಮತ್ತು ಈ ವಲಯಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ.
“ನಾವು ಆಫ್ಘನ್ನರು ಉತ್ತಮ ಆತಿಥ್ಯವನ್ನು ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತೇವೆ. ಆದರೆ ಕಾಶ್ಮೀರಿಗರೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಇಲ್ಲಿನ ಕೆಲವು ಯುವಕರ ಜೊತೆ ಸಂವಹನ ನಡೆಸಿದ್ದೇನೆ. ಈ ಹುಡುಗಿ ಬಾಸ್ಕೆಟ್‌ಬಾಲ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾಳೆ. ಆಕೆಯ ನಿರೀಕ್ಷೆಯೂ ಎತ್ತರದಲ್ಲಿದೆ. ಈ ಸುಂದರ ಕಣಿವೆ ಮತ್ತು ಇಲ್ಲಿನ ಜನರಿಗೆ ಶುಭಾಶಯಗಳನ್ನು ಕೋರುತ್ತೇನೆ ಎಂದು ಖದಿರಿ ಟ್ವೀಟ್ ಮಾಡಿದ್ದಾರೆ.
https://twitter.com/tahirqadiry/status/1227540081201696775?s=19
ಈ ಬೆಳವಣಿಗೆಯ ಬಗ್ಗೆ ಮಾತನಾಡಿದ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿಯ ಪುತ್ರಿ, ಇಂಟರ್ನೆಟ್ ನಿಷೇಧ ಮತ್ತು ಸಾರ್ವಜನಿಕ ಸುರಕ್ಷತೆ ಕಾಯ್ದೆ ಅಡಿಯಲ್ಲಿ ರಾಜಕೀಯ ಮುಖಂಡರನ್ನು ಬಂಧಿಸಿರುವ ಬಗ್ಗೆ ಸರ್ಕಾರವನ್ನು ರಾಯಭಾರಿಗಳು ಪ್ರಶ್ನಿಸಬೇಕು ಎಂದು ಆಗ್ರಹಿಸಿದ್ದಾರೆ.
“ಆಗಸ್ಟ್ 5 ರಿಂದ ಇಂಟರ್ನೆಟ್ ನಿರ್ಬಂಧ ಮಾಡಿರುವ ಬಗ್ಗೆ ಮತ್ತು ಇದರಿಂದ ಉಂಟಾಗಿರುವ ಆರ್ಥಿಕ ನಷ್ಟದ ಬಗ್ಗೆ ನೀವು ಮತ್ತು @EU_in_India ಭಾರತ ಸರ್ಕಾರವನ್ನು ಪ್ರಶ್ನಿಸುತ್ತೀರಿ ಎಂದು ಭಾವಿಸಿದ್ದೇನೆ. ಕಾಶ್ಮೀರದಲ್ಲಿ ಸ್ಥಳೀಯ ಮಾಧ್ಯಮದ ಮೇಲೆ ಭಾರತ ಸರ್ಕಾರ ಒತ್ತಡ ಹೇರುತ್ತಿದೆ, 3 ಮಾಜಿ ಸಿಎಂಗಳ ಮೇಲೆ ಪಿಎಸ್‌ಎ ಹೇರಿದೆ, ಜನರಲ್ಲಿ ಭೀತಿ ಹುಟ್ಟಿಸಲು ಸೇನೆಯನ್ನು ನಿಯೋಜಿಸಿದೆ. ಸಹಜ ಸ್ಥಿತಿ ಎಂಬುದುಮರೀಚಿಕೆಯಾಗಿಎಂದು ತನ್ನ ತಾಯಿಯ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.
https://twitter.com/MehboobaMufti/status/1227509936374079488?s=19
ಕಳೆದ ವರ್ಷ ಆಗಸ್ಟ್ 5 ರಂದು 370ನೇ ವಿಧಿಯನ್ನು ರದ್ದದುಗೊಳಿಸಿದ ನಂತರ ವಿದೇಶಿ ನಿಯೋಗ ಮೂರನೇ ಬಾರಿಗೆ ಭೇಟಿ ನೀಡುತ್ತಿದೆ. ಈ ಹಿಂದೆ ಜನವರಿ 9 ರಂದು 15 ರಾಯಭಾರಿಗಳು ಭೇಟಿ ನೀಡಿದ್ದರು. ಇದರಲ್ಲಿ ಭಾರತಕ್ಕೆ ಅಮೆರಿಕದ ರಾಯಭಾರಿ ಕೆನ್ನೆತ್ ಜಸ್ಟರ್ ಕೂಡ ಇದೇ ಉದ್ದೇಶವನ್ನಿಟ್ಟಿಕೊಂಡು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಆದರೆ ಜಮ್ಮು ಕಾಶ್ಮೀರಕ್ಕೆ ನಾವು ಯಾವುದೇ ಮಾರ್ಗದರ್ಶನದ ಪ್ರವಾಸವನ್ನು ಕೈಗೊಳ್ಳುವುದಿಲ್ಲ ಎಂದು ನಿರಾಕರಿಸಿದ ಐರೋಪ್ಯ ಒಕ್ಕೂಟ ಈ ನಿಯೋಗದಲ್ಲಿ ಭೇಟಿ ಮಾಡಿರಲಿಲ್ಲ.
ಅಕ್ಟೋಬರ್‌ನಲ್ಲಿ ಖಾಸಗಿಯಾಗಿ ಐರೋಪ್ಯ ಒಕ್ಕೂಟದ ಕೆಲವು ಸಂಸದರು ಕಾಶ್ಮೀರ ಕಣಿವೆಗೆ ಭೇಟಿ ನೀಡಿದ್ದರು. ಕಳೆದ ವಾರ ಸಾರ್ವಜನಿಕ ಸುರಕ್ಷತೆ ಕಾಯ್ದೆ ಅಡಿಯಲ್ಲಿ ಮಾಜಿ ಸಿಎಂ ಉಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ವಿರುದ್ಧ ಆರೋಪ ಹೊರಿಸಲಾಗಿದ್ದು, ಆಗಸ್ಟ್‌ನಿಂದಲೂ ಇವರು ಮುಂಜಾಗ್ರತಾ ಕ್ರಮವಾಗಿ ಬಂಧನದಲ್ಲಿದ್ದಾರೆ.
ಕಾಶ್ಮೀರದ ಬಗ್ಗೆ ನಿಲುವಳಿ?
ನರೇಂದ್ರ ಮೋದಿ ಸರ್ಕಾರವು ಆರಂಭದಲ್ಲಿ ಜೂನ್‌ನಲ್ಲಿ ಐರೋಪ್ಯ ಒಕ್ಕೂಟದ ರಾಯಭಾರ ಅಧಿಕಾರಿಗಳಿಗೆ ಪ್ರವಾಸ ಆಯೋಜನೆ ಮಾಡಲು ಯೋಜನೆ ರೂಪಿಸಿತ್ತು. ಆದರೆ ಕಾಶ್ಮೀರ ಮತ್ತು ಸಿಎಎ ಕುರಿತು ಜಂಟಿ ಕರಡು ನಿಲುವಳಿ ಕುರಿತು ಐರೋಪ್ಯ ಒಕ್ಕೂಟದ ಸಂಸತ್ತು ಕಳೆದ ವಾರ ಚರ್ಚೆ ನಡೆಸಿದ ಹಿನ್ನೆಲೆಯಲ್ಲಿ ಅವಧಿಗೂ ಮೊದಲೇ ಭೇಟಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಯಿತು.
ಜನವರಿ 29 ರಂದು ಚರ್ಚೆ ನಡೆಸಿದ ನಂತರ, ನಿಲುವಳಿಯನ್ನು ಮತಕ್ಕೆ ಹಾಕುವ ನಿರ್ಧಾರವನ್ನು ಮುಂದೂಡಲಾಯಿತು. ಇದನ್ನು ಭಾರತವು ರಾಜತಾಂತ್ರಿಕ ವಿಜಯ ಎಂದು ಕರೆದುಕೊಂಡಿದ್ದೂ ಆಯಿತು. ಐರೋಪ್ಯ ಒಕ್ಕೂಟದ ಮುಂಬರುವ ಅಧಿವೇಶನದಲ್ಲಿ ಈ ನಿಲುವಳಿಯನ್ನು ಮತಕ್ಕೆ ಹಾಕಲಾಗುತ್ತದೆ. ಮುಂದಿನ ಅಧಿವೇಶನವನ್ನು ಮಾರ್ಚ್‌ನ ಕೊನೆಯ ವೇಳೆ ಹಮ್ಮಿಕೊಳ್ಳಲಾಗಿದೆ.
‘ಎಲ್ಲ ರಾಜಕೀಯ ಕೈದಿಗಳ ಬಿಡುಗಡೆ ಮಾಡಬೇಕು’
ದಾಲ್ ಸರೋವರದ ದಡದಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ವಿದೇಶಿ ನಿಯೋಗವನ್ನು ಭೇಟಿ ಮಾಡಿದ ಹಿರಿಯ ಬಿಜೆಪಿ ನಾಯಕ ಖಾಲಿದ್ ಜಹಾಂಗೀರ್, ರಾಜಕೀಯ ಕೈದಿಗಳ ಬಿಡುಗಡೆ ಕುರಿತ ಪ್ರಸ್ತಾವನೆಯನ್ನು ಮುಂದಿಟ್ಟಿರುವುದಾಗಿ ಹೇಳಿದ್ದಾರೆ.
ಕಾಶ್ಮೀರದ ಜನರು ಶಾಂತಿ ಬಯಸುವವರು. ಈ ಪೈಕಿ ಬಹುತೇಕ ಜನರು ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಬದಲಿಸಿದ್ದಕ್ಕೆ ಮೆಚ್ಚುಗೆ ಹೊಂದಿದ್ದಾರೆ. ಈ ಭಾಗವನ್ನು ಹಾಳು ಮಾಡಿದ ಜನರು ಮತ್ತೆ ಇಲ್ಲಿ ಅಧಿಕಾರ ಅನುಭವಿಸುವುದನ್ನು ಅವರು ಬಯಸುವುದಿಲ್ಲ” ಎಂದು ಈಟಿವಿ ಭಾರತ್‌ಗೆ ಫೋನ್ ಮೂಲಕ ಮಾತನಾಡಿದರು.
ಮೆಹಬೂಬಾ ಮುಫ್ತಿ ಮತ್ತು ಉಮರ್ ಅಬ್ದುಲ್ಲಾ ಸೇರಿದಂತೆ ರಾಜಕೀಯ ಮುಖಂಡರನ್ನು ಬಿಡುಗಡೆ ಮಾಡಬೇಕು ಎಂದು ಭಾರತ ಸರ್ಕಾರಕ್ಕೆ ನಾನು ಆಗ್ರಹಿಸಿದ್ದೇನೆ. ಅವರನ್ನು ಬಿಡುಗಡೆ ಮಾಡಿ ಭ್ರಷ್ಟಾಚಾರ ಆರೋಪ ಮತ್ತು ಇತರ ಆರೋಪಗಳ ಕುರಿತು ವಿಚಾರಣೆ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಮೂವರು ಯುವಕರನ್ನು ಬಂಧಿಸಿದ ಪೊಲೀಸರು ಈ ಮಧ್ಯೆ ಕಾಶ್ಮೀರ ಯೂತ್ ಪವರ್ ಎಂಬ ಸಂಘಟನೆಯನ್ನು ಪ್ರತಿನಿಧಿಸುತ್ತಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ವಿದೇಶಿ ನಿಯೋಗವು ವಾಸಿಸುತ್ತಿರುವ ಹೋಟೆಲ್ ಬಳಿ ಇವರು ಪ್ರತಿಭಟನೆ ನಡೆಸುತ್ತಿದ್ದರು. ತಮ್ಮ ಎನ್‌ಜಿಒದ ಭಿತ್ತಿಪತ್ರಗಳನ್ನು ಹಿಡಿದುಕೊಂಡು, ವಿದೇಶಿ ನಿಯೋಗವನ್ನು ಕರೆಸಿ ಸರ್ಕಾರ ಹಣ ವೆಚ್ಚ ಮಾಡಬಾರದು. ಬದಲಿಗೆ ಕೇಂದ್ರಾಡಳಿತ ಪ್ರದೇಶದ ಕಲ್ಯಾಣಕ್ಕೆ ಹೂಡಿಕೆ ಮಾಡಬೇಕು ಎಂದು ಇವರು ಆಗ್ರಹಿಸುತ್ತಿದ್ದರು.
‘ಪ್ರವಾಸೋದ್ಯಮ ಮತ್ತು ಎಲ್ಲವೂ ಸಹಜ ಸ್ಥಿತಿಗೆ’
ಶಿಕರ ರೈಡ್ ಮಾಡಿದ ನಂತರ ವರದಿಗಾರರೊಂದಿಗೆ ಮಾತನಾಡಿದ ಡೊಮಿನಿಕನ್ ರಿಪಬ್ಲಿಕ್ ರಾಯಭಾರಿ ಫ್ರಾಂಕ್ ಹಾನ್ಸ್ ಡಾನೆನ್‌ಬರ್ಗ್ ಕ್ಯಾಸ್ಟೆಲನ್ಸ್ “ಕಾಶ್ಮೀರವು ಸುಂದರ ತಾಣ ಮತ್ತು ನಾವು ಕೇವಲ ಪ್ರವಾಸಿಗಳಾಗಿ ಇಲ್ಲಿಗೆ ಬಂದಿದ್ದೇವೆ’ ಎಂದಿದ್ದಾರೆ.
ನಾನು ಎಂದಿಗೂ ಕಾಶ್ಮೀರಕ್ಕೆ ಭೇಟಿ ನೀಡಬೇಕು ಎಂದು ಬಯಸಿದ್ದೆ ಎಂದು ಭಾರತಕ್ಕೆ ಅಫ್ಘಾನಿಸ್ತಾನದ ರಾಯಭಾರಿ ತಹಿರ್ ಖದಿರಿ ಹೇಳಿದ್ದಾರೆ.
ಶಾಲೆ ತೆರೆದಿದೆ. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಅಂಗಡಿಗಳು ತೆರೆದಿವೆ. ವಿಶ್ವದ ಈ ಭಾಗದ ಪ್ರದೇಶಕ್ಕೆ ನಾನು ಭೇಟಿ ನೀಡಲು ಎಂದಿನಿಂದಲೂ ಬಯಸಿದ್ದೆ. ಇದು ಅದ್ಭುತವಾಗಿದೆ ಎಂದು ಖದಿರಿ ಹೇಳಿದ್ದಾರೆ. ಆಸಕ್ತಿಕರ ಸಂಗತಿಯೆಂದರೆ ಚಳಿಗಾಲದ ರಜೆಯ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಎಲ್ಲ ಶಾಲೆಗಳೂ ಮುಚ್ಚಿವೆ.
ಎಂಇಎ ಪಟ್ಟಿ
ವಿವಿಧ ಭಾಗದ 25 ದೇಶಗಳ ರಾಯಭಾರ ಅಧಿಕಾರಿಗಳನ್ನು ಈ ಗ್ರೂಪ್ ಒಳಗೊಂಡಿತ್ತು. ಇದರಲ್ಲಿ ಅಫ್ಘಾನಿಸ್ತಾನ, ಆಸ್ಟ್ರಿಯಾ, ಬಲ್ಗೇರಿಯಾ, ಕೆನಡಾ, ಝೆಕ್ ರಿಪಬ್ಲಿಕ್, ಡೆನ್ಮಾರ್ಕ್, ಡೊಮಿನಿಕನ್ ರಿಪಬ್ಲಿಕ್, ಐರೋಪ್ಯ ಒಕ್ಕೂಟ, ಫ್ರಾನ್ಸ್, ಜರ್ಮನಿ, ಗಿನಿಯಾ, ಹಂಗರಿ, ಇಟಲಿ, ಕೀನ್ಯಾ, ಕಿರ್ಗಿಜ್, ಮೆಕ್ಸಿಕೋ, ನಮೀಬಿಯಾ, ನೆದರ್ಲೆಂಡ್ಸ್, ನ್ಯೂಜಿಲೆಂಡ್, ಪೋಲೆಂಡ್, ರವಾಂಡ, ಸ್ಲೋವಾಕಿಯಾ, ತಜಿಕಿಸ್ತಾನ್, ಉಗಾಂಡ ಮತ್ತು ಉಜ್ಬೆಕಿಸ್ತಾನ್ ಪ್ರತಿನಿಧಿಗಳು ಹಾಜರಿದ್ದರು.