ಮುಂಬೈ: ಮದ್ಯದ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಸರ್ಕಾರ ಅನುಮತಿ ನೀಡಬೇಕು ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಸಹೋದರ ರಾಜ್ ಠಾಕ್ರೆ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನಾ ಪಕ್ಷದ ಅಧ್ಯಕ್ಷರೂ ಆಗಿರುವ ರಾಜ್ ಠಾಕ್ರೆ ಇಂದು ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದು, ನೈತಿಕ ಸಮಸ್ಯೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮದ್ಯದಂಗಡಿಗಳಿಗೆ ಅನುಮತಿ ನೀಡಬೇಕು ಎಂದು ಕೋರಿದ್ದಾರೆ.
ಅಬಕಾರಿ ಇಲಾಖೆಯಿಂದ ಪ್ರತಿ ನಿತ್ಯ ರಾಜ್ಯ ಸರ್ಕಾರಕ್ಕೆ 41.66 ಕೋಟಿ ರೂಪಾಯಿ ಆದಾಯ ಬರುತ್ತದೆ. ತಿಂಗಳಿಗೆ ಸುಮಾರು 1,250 ಕೋಟಿ ಹಾಗೂ ವರ್ಷಕ್ಕೆ 14 ಸಾವಿರ ಕೋಟಿ ರೂಪಾಯಿ ಗಳ ವರಮಾನವಿದೆ. ಕಳೆದ 35 ದಿನಗಳಿಂದ ಲಾಕ್‌ಡೌನ್ ಮಾಡಲಾಗಿದೆ. ಮುಂದೆಯೂ ಈ ನಿರ್ಬಂಧವನ್ನು ವಿಸ್ತರಿಸುವ ಸಾಧ್ಯತೆ ಇದೆ. ಈ ವಲಯದಿಂದ ಆಗುತ್ತಿರುವ ನಷ್ಟವನ್ನು ಲೆಕ್ಕಚಾರ ಮಾಡಿ. ಮುಂದಿನ ದಿನಗಳಲ್ಲೂ ನಷ್ಟ ಮುಂದುವರೆಯುವ ಸಾಧ್ಯತೆ ಇದೆ. ಹೀಗಾಗಿ ವೈನ್‌ಶಾಪ್‌ಗಳನ್ನು ತೆರೆಯಲು ಅವಕಾಶ ನೀಡಿ ಎಂದಿದ್ದಾರೆ.
ಮಾರ್ಚ್ 18 ರಿಂದ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಇದೆ. ಮೊದಲು ಮಾರ್ಚ್ 31, ನಂತರ ಏಪ್ರಿಲ್14, ಬಳಿಕ ಮೇ 3 ರವರೆಗೆ ಇದನ್ನು ವಿಸ್ತರಿಸಲಾಗಿದೆ. ಹೀಗಾಗಿ ಲಾಕ್‌ಡೌನ್ ಮುಗಿಯುವುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ. ಮದ್ಯದಂಗಡಿಗಳನ್ನು ಬಂದ್ ಮಾಡಿರುವ ನಿರ್ಧಾರದಿಂದ ಕೋವಿಡ್ ಸಮಸ್ಯೆ ಬಗೆಹರಿಯಲ್ಲ. ಮದ್ಯದಂಗಡಿಗಳನ್ನು ತೆರೆದರೆ ಅವಶ್ಯಕತೆ ಇರುವ ಮದ್ಯ ಪ್ರಿಯರು ಎಣ್ಣೆ ಕೊಳ್ಳುತ್ತಾರೆ. ಇದರಿಂದ ಸರ್ಕಾರಕ್ಕೆ ಆದಾಯ ಹರಿದು ಬರಲಿದೆ ಅಂತ ಸಲಹೆ ನೀಡಿದ್ದಾರೆ.
ಇಡೀ ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಪೈಕಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. ಸಿಎಂ ಉದ್ಧವ್ ಠಾಕ್ರೆ ತಮ್ಮ ಸಹೋದರನ ಮನವಿಯನ್ನು ಪರಿಗಣಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕು.