ನವದೆಹಲಿ: ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮಮಂದಿರ ದೇಗುಲದ ಭೂಮಿ ಪೂಜೆಗೆ ಶಿಲಾನ್ಯಾಸ ನಡೆಸಲಿದ್ದು, ಅದಕ್ಕೆ ತಡೆ ಕೋರಿ ಅಲಹಾಬಾದ್ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದೀಗ ವಜಾಗೊಂಡಿದೆ.
ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತ ಸಾಂಕೇತ್ ಗೋಖಲೆ ತಡೆ ನೀಡಿ ಅರ್ಜಿ ಸಲ್ಲಿಕೆ ಮಾಡಿದ್ದರು. ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ಈ ಸಮಯದಲ್ಲಿ ಭೂಮಿ ಪೂಜೆ ನಡೆಸುವುದು ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂದು ಅವರು ಹೇಳಿದ್ದರು. ಜತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು 300ಕ್ಕೂ ಹೆಚ್ಚಿನ ವಿಐಪಿಗಳಿಗೆ ಆಹ್ವಾನ ನೀಡಲಾಗಿದೆ. ಇದು ದೇಶದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದಿದ್ದರು.
ಅಶುಭ ಮುಹೂರ್ತದಲ್ಲಿ ರಾಮಮಂದಿರಕ್ಕೆ ಅಡಿಗಲ್ಲು: ಶಂಕರಾಚಾರ್ಯ ಸರಸ್ವತಿ ಸ್ವಾಮೀಜಿ ಅಸಮಾಧಾನ
ಇದೀಗ ಈ ಅರ್ಜಿ ವಜಾಗೊಳಿಸಿರುವ ಅಲಹಾಬಾದ್ ಹೈಕೋರ್ಟ್, ಸಲ್ಲಿಕೆಯಾಗಿರುವ ಅರ್ಜಿ ಕೇವಲ ಊಹೆಗಳಿಂದ ಕೂಡಿದ್ದು, ಲಾಕ್ಡೌನ್ ನಿಯಮ ಉಲ್ಲಂಘನೆಯಾಗುತ್ತದೆ ಎಂದು ಆರಂಭದಲ್ಲೇ ಹೇಳುವುದು ಅಸಾಧ್ಯ ಎಂದಿದೆ. ಈಗಾಗಲೇ ಉತ್ತರಪ್ರದೇಶ ಸರ್ಕಾರ, ಸಾಮಾಜಿಕ ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವ ಎಲ್ಲ ರೀತಿಯ ಮಾಹಿತಿ ನೀಡಿದ್ದು, ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದೆ.
ಇದೇ ವಿಷಯಕ್ಕೆ ಅಖಿಲ ಭಾರತ ಕ್ಷತ್ರಿಯ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ತನ್ನನ್ನು ರಾಮನ ವಂಶಸ್ಥರೆಂದು ಬಣ್ಣಿಸುವ ರಾಜ ರಾಜೇಂದ್ರ ಸಿಂಗ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಕೂಡ ಭಾದ್ರಪದ ಸಮಯದಲ್ಲಿ ನಡೆಯುವ ಯಾವುದೇ ಕಾರ್ಯ ವಿನಾಶಕಾರಿಯಾಗಿರುತ್ತದೆ. ಭೂಮಿ ಪೂಜೆಗೆ ನಿಗದಿಪಡಿಸಿದ ಆಗಸ್ಟ್ 5ರ ಮಧ್ಯಾಹ್ನ 12 ಗಂಟೆ 15 ನಿಮಿಷ 32 ಸೆಂಕೆಡ್ ಅಶುಭ ಘಳಿಯಾಗಿದೆ ಎಂದು ತಿಳಿಸಿದರು.