ಅಲಹಾಬಾದ್ (ಉತ್ತರ ಪ್ರದೇಶ): ಲಾಕ್‌ಡೌನ್ ಸಮಯದಲ್ಲಿ ಯಾವುದೇ ಧ್ವನಿವರ್ಧಕವನ್ನು ಬಳಸದೇ ಉತ್ತರ ಪ್ರದೇಶದ ಮಸೀದಿಗಳಲ್ಲಿ ಒಬ್ಬ ವ್ಯಕ್ತಿಯು 'ಅಜಾನ್' ಪಠಿಸಲು ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ.
ಅಜಾನ್ ಇಸ್ಲಾಮಿನ ಅತ್ಯಗತ್ಯ ಮತ್ತು ಅವಿಭಾಜ್ಯ ಅಂಗವಾಗಿರಬಹುದು. ಆದರೆ, ಧ್ವನಿವರ್ಧಕಗಳು ಅಥವಾ ಇತರ ಧ್ವನಿ ವರ್ಧಕ ಸಾಧನಗಳ ಮೂಲಕ ಅದರ ಪಠಣವು ಧರ್ಮದ ಅವಿಭಾಜ್ಯ ಅಂಗ ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಶಶಿ ಕಾಂತ್ ಗುಪ್ತಾ ಮತ್ತು ಅಜಿತ್ ಕುಮಾರ್ ಅವರ ನ್ಯಾಯಪೀಠವು ಮುಸ್ಲಿಂ ಸಮುದಾಯಕ್ಕೆ ಹೇಳಿದೆ.
'ಯಾವುದೇ ಧ್ವನಿವರ್ಧಕ ಸಾಧನವನ್ನು ಬಳಸದೇ ಮಾನವ ಧ್ವನಿಯ ಮೂಲಕ ಮಸೀದಿ ಉಸ್ತುವಾರಿಗಳು ಅಜಾನ್ ಅನ್ನು ಪಠಿಸಬಹುದು ಎಂದು ನಾವು ಪರಿಗಣಿಸಿದ್ದೇವೆ. ಕೋವಿಡ್-19 ಲಾಕ್‌ಡೌನ್ ಮಾರ್ಗಸೂಚಿಗಳ ನೆಪದಲ್ಲಿ ಅಡಚಣೆಯನ್ನು ಉಂಟು ಮಾಡದಂತೆ ಆಡಳಿತಕ್ಕೆ ನಿರ್ದೇಶಿಸಲಾಗಿದೆ' ಎಂದು ನ್ಯಾಯಪೀಠ ತೀರ್ಪು ನೀಡಿದೆ.
ಮಾಜಿ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಗಾಜಿಪುರದ ಲೋಕಸಭಾ ಸದಸ್ಯ ಅಫ್ಜಲ್ ಅನ್ಸಾರಿ ಸೇರಿದಂತೆ ಅನೇಕ ಮನವಿಗಳ ಕುರಿತು ನ್ಯಾಯಪೀಠ ತನ್ನ ತೀರ್ಪು ನೀಡಿದೆ.