ವೈಜಾಗ್ (ಆಂಧ್ರಪ್ರದೇಶ): ಇಲ್ಲಿನ ಸಾರ್ವಜನಿಕ ವಲಯದ ವಿಶಾಖಾ ಸ್ಟೀಲ್ ಪ್ಲಾಂಟ್ ಅನ್ನು ಖಾಸಗೀಕರಣ ಮಾಡಲು ನಿರ್ಧರಿಸಿರುವ ಹಿನ್ನೆಲೆ ವಿರೋಧ ವ್ಯಕ್ತವಾಗುತ್ತಿದೆ. ಸ್ಟೀಲ್ ಪ್ಲಾಂಟ್ ಅನ್ನು ಖಾಸಗೀಕರಣ ಮಾಡದಂತೆ ಎಲ್ಲಾ ಪಕ್ಷಗಳು ಪ್ರತಿಭಟನೆಗಿಳಿದಿವೆ.
ಕಾರ್ಮಿಕ ಸಂಘಟನೆಗಳು ಈ ಸ್ಟೀಲ್ ಕಂಪನಿಗಾಗಿ ಜೀವವನ್ನೇ ನೀಡುತ್ತೇವೆ ಎನ್ನುತ್ತಿದ್ದು, ಆಂದೋಲನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಇದಲ್ಲದೆ ವೈಎಸ್ಆರ್ಸಿಪಿ ನಾಯಕರು ಸಹ ಇದಕ್ಕೆ ಬೆಂಬಲ ಸೂಚಿಸಿದ್ದು, ಪ್ರತಿಕೂಲ ಸ್ಥಿತಿ ಎದುರಾದರೆ ರಾಜೀನಾಮೆಗೂ ಸಿದ್ದ ಎಂದಿದ್ದಾರೆ.
ವಿಶಾಖಪಟ್ಟಣಂನಲ್ಲಿ ಕಾರ್ಮಿಕರು ಆಯೋಜಿಸಿದ್ದ ಸಭೆಯಲ್ಲಿ ಭಾಗಿಯಾಗಿದ್ದ ವೈಎಸ್ಆರ್ಸಿಪಿ ಸಂಸದ ವಿಜಯಸಾಯ್ ರೆಡ್ಡಿ, ಸ್ಟೀಲ್ ಪ್ಲಾಂಟ್ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಮೂಲಕ ಕಾರ್ಮಿಕರ ಜೊತೆ ನಿಲ್ಲುವುದಾಗಿ ತಿಳಿಸಿದರು. ಲಾಭದಲ್ಲಿರುವ ಕಂಪನಿಯನ್ನು ಪಿತೂರಿಯಿಂದ ಖಾಸಗೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಸಭೆಯಲ್ಲಿ ಸಚಿವ ಆವಂತಿ ಶ್ರೀನಿವಾಸ್, ಸಂಸದ ಎವಿವಿ ಸತ್ಯನಾರಾಯಣ, ಶಾಸಕ ಅಮರನಾಥ್ ಇತರರು ಭಾಗಿಯಾಗಿದ್ದರು.
ಇದಲ್ಲದೆ ರಾಜ್ಯ ಸರ್ಕಾರವು ಸ್ಟೀಲ್ ಕಂಪನಿ ಖಾಸಗೀಕರಣ ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಬೇಕು. ಈ ಮೂಲಕ ರಾಜ್ಯವೇ ಕಂಪನಿ ನಡೆಸಲು ಮುಂದಾಗಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ. ಇದಕ್ಕಾಗಿ ಎಲ್ಲಾ ಪಕ್ಷದ ನಾಯಕರು, ಕಾರ್ಮಿಕ ಸಂಘಟನೆಗಳೂ ಒಗ್ಗಟ್ಟಾಗಬೇಕು ಎಂದು ಕಾರ್ಮಿಕ ಸಂಘಟನೆಗಳು ಮನವಿ ಮಾಡಿವೆ.
ಇದನ್ನೂ ಓದಿ: ಇ-ಟೆಂಡರ್ ಹಗರಣ: ಭೋಪಾಲ್, ಹೈದರಾಬಾದ್‌ನಲ್ಲಿ ಐಟಿ ದಾಳಿ