ಮುಂಬೈ : ಸಾಂಕ್ರಾಮಿಕ ಕೊರೊನಾ ವೈರಸ್ ವಿರುದ್ಧ ಸೆಣಸುತ್ತಾ ಜನರ ಜೀವ ಉಳಿಸಲು ಶ್ರಮಿಸುತ್ತಿರುವ ವೈದ್ಯ ಸಮುದಾಯಕ್ಕೆ ಶುಲ್ಕ ವಿಧಿಸದೆ 50,000 ಸೀಟುಗಳನ್ನು ನೀಡುವುದಾಗಿ ನೋ-ಫ್ರಿಲ್ಸ್ ವಿಮಾನಯಾನ ಏರ್‌ಏಷ್ಯಾ ಇಂಡಿಯಾ ತಿಳಿಸಿದೆ.
ನಮ್ಮ ವೈದ್ಯರಿಗೆ ಗೌರವದ ಸಂಕೇತವಾಗಿ ಮತ್ತು ಕಳೆದ ಕೆಲವು ತಿಂಗಳುಗಳಿಂದ ಅವರ ಪ್ರಶಂಸನೀಯ ಮೌಲ್ಯಗಳನ್ನು ಗುರುತಿಸಿ, ರಾಷ್ಟ್ರವನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿಡಲು ದಣಿವರಿಯದ ಪ್ರಯತ್ನಗಳಿಗೆ ನಮ್ಮ ಕೃತಜ್ಞತೆ ವ್ಯಕ್ತಪಡಿಸಲು ಬಯಸಿದ್ದೇವೆ ಎಂದು ಏರ್‌ಏಷ್ಯಾ ಇಂಡಿಯಾ ಮುಖ್ಯ ವಾಣಿಜ್ಯ ಅಧಿಕಾರಿ ಅಂಕುರ್ ಗರ್ಗ್ ಹೇಳಿದರು.
ರೆಡ್‌ಪಾಸ್ ಉಪಕ್ರಮದಡಿಯಲ್ಲಿ ಏರ್‌ಏಷ್ಯಾ ಇಂಡಿಯಾ ತನ್ನ ದೇಶೀಯ ವಲಯಗಳಲ್ಲಿ ಯಾವುದೇ ವಿಮಾನ ಶುಲ್ಕವಿಲ್ಲದೆ 50,000 ಸೀಟುಗಳನ್ನು ವೈದ್ಯರಿಗೆ ನೀಡಲಿದೆ. ರಾಷ್ಟ್ರವನ್ನು ಬೆಂಬಲಿಸುವಲ್ಲಿ ಅವರು ಮಾಡಿದ ಶ್ಲಾಘನೀಯ ಪ್ರಯತ್ನಗಳಿಗೆ ಕೃತಜ್ಞತೆಯ ಸಂಕೇತವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿಮಾನ ನಿಲ್ದಾಣ ಶುಲ್ಕಗಳು ಮತ್ತು ತೆರಿಗೆಗಳನ್ನು ಪ್ರಯಾಣಿಕರು ಭರಿಸಲಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.