ಚೆನ್ನೈ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸಿಎಂ ಕೆ.ಪಳನಿಸ್ವಾಮಿ ಅವರನ್ನು ನಾಮನಿರ್ದೇಶನ ಮಾಡಲು ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆಯ ಜನರಲ್ ಕೌನ್ಸಿಲ್ ಇಂದು ಅನುಮೋದನೆ ನೀಡಿದೆ. ಚೆನ್ನೈನಲ್ಲಿ ಇಂದು ನಡೆದ ಸಭೆಯಲ್ಲಿ ಕೌನ್ಸಿಲ್ ಈ ನಿರ್ಣಯ ಅಂಗೀಕರಿಸಿದೆ.
ಮಿತ್ರಪಕ್ಷಗಳನ್ನು ಅಂತಿಮಗೊಳಿಸಲು, ಅವರೊಂದಿಗೆ ಸೀಟು ಹಂಚಿಕೆ ಒಪ್ಪಂದ ಮತ್ತು ಅಧಿಕಾರ ಉಳಿಸಿಕೊಳ್ಳಲು ಮತದಾನ ತಂತ್ರ ರೂಪಿಸಲು ಉಪ ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಅವರಿಗೆ ಕೌನ್ಸಿಲ್ ಸೂಚಿಸಿದೆ. ಎಐಎಡಿಎಂಕೆ ತಮಿಳುನಾಡಿನ ಮೈತ್ರಿಕೂಟ ಮುನ್ನಡೆಸುವ ಪಕ್ಷವಾಗಿದೆ. ಹೀಗಾಗಿ ಈ ನಿರ್ಣಯವನ್ನು ಒಪ್ಪುವವರು ಪಕ್ಷದಲ್ಲಿ ಉಳಿಯಬಹುದು ಮತ್ತು ಒಪ್ಪದವರು ಹೊರ ಹೋಗಬಹುದು ಎಂದು ಹೇಳಲಾಗಿದೆ.
2020 ರ ಅಕ್ಟೋಬರ್‌ನಲ್ಲಿ ರಚಿಸಲಾದ 11 ಸದಸ್ಯರ ಸ್ಟೀರಿಂಗ್ ಸಮಿತಿಯ ನಿರ್ಧಾರವನ್ನು ಕೌನ್ಸಿಲ್ ಅಂಗೀಕರಿಸಿತು. ಇದೇ ವೇಳೆ, ಸಭೆಯಲ್ಲಿ ಪಳನಿಸ್ವಾಮಿಯನ್ನು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಟೀಕಿಸಿದ್ದನ್ನು ಖಂಡಿಸಲಾಯ್ತು. ಇಂದು ನಡೆದ ಸಭೆಯ ಅಧ್ಯಕ್ಷತೆಯನ್ನು ಪಕ್ಷದ ಇ.ಮಧುಸೂಧನನ್ ವಹಿಸಿದ್ದರು.
ಇನ್ನು ಎಐಎಡಿಎಂಕೆ, ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ ) ಮತ್ತು ಎಂಎನ್‌ಎಂ (ಮಕ್ಕಲ್ ನಿಧಿ ಮಾಯಂ) ಪಕ್ಷ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ತಮ್ಮ ಚುನಾವಣಾ ಪ್ರಚಾರ ಪ್ರಾರಂಭಿಸಿವೆ.
ಇದನ್ನೂ ಓದಿ:ಮೂಲ ಸೌಕರ್ಯ ವೆಚ್ಚ ಹೆಚ್ಚಿಸಿ ಖಾಸಗೀಕರಣ ವಿಸ್ತರಿಸುವಂತೆ ಪ್ರಧಾನಿ ಮೋದಿಗೆ ವಿತ್ತ ತಜ್ಞರು ಸಲಹೆ