ದಾವೋಸ್: ಭಾರತ-ಪಾಕಿಸ್ತಾನದ ನಡುವೆ ಜಮ್ಮು-ಕಾಶ್ಮೀರ ವಿಚಾರವಾಗಿ ನಡೆಯುತ್ತಿರುವ ವಿವಾದದಲ್ಲಿ ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧವಾಗಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ವೇಳೆ ಟ್ರಂಪ್ ಈ ಹೇಳಿಕೆ ಪುನರುಚ್ಚರಿಸಿದ್ದಾರೆ.
ಜಮ್ಮು-ಕಾಶ್ಮೀರ ವಿಚಾರವಾಗಿ ಭಾರತ-ಪಾಕ್ ನಡುವೆ ನಡೆಯುತ್ತಿರುವ ಪ್ರತಿದಿನದ ವಿದ್ಯಮಾನಗಳ ಬಗ್ಗೆ ನಾವು ಸೂಕ್ಷ್ಮವಾಗಿ ಮಾಹಿತಿ ಪಡೆದುಕೊಳ್ಳುತ್ತಿದ್ದು, ವಿವಾದ ಬಗೆಹರಿಸುವಲ್ಲಿ ನಾವು ಖಂಡಿತವಾಗಿ ನೆರವು ನೀಡಲು ಸಿದ್ಧ ಎಂದು ತಿಳಿಸಿದ್ದಾರೆ. ಇದೇ ವೇಳೆ ಅಗತ್ಯಬಿದ್ದರೆ ತಾವು ಪಾಕಿಸ್ತಾನಕ್ಕೂ ಭೇಟಿ ನೀಡುವುದಾಗಿ ಹೇಳಿಕೆ ನೀಡಿರುವ ಟ್ರಂಪ್ ಭಾರತ-ಪಾಕ್ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಭಾರತ ಜಮ್ಮು-ಕಾಶ್ಮೀರ ಸಮಸ್ಯೆ ದ್ವಿಪಕ್ಷೀಯವಾಗಿದ್ದು, ಸಮಸ್ಯೆ ಬಗೆಹರಿಸಲು ಬೇರೆ ದೇಶದ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ.