ನವದೆಹಲಿ: ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ನಾಯಕ ರಾಜ್ ಠಾಕ್ರೆ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿದರು.
ಸೋನಿಯಾರ ನಿವಾಸದಲ್ಲಿ ಭೇಟಿಯಾದ ರಾಜ್ ಠಾಕ್ರೆ, ಚುನಾವಣೆಗಾಗಿ ಕಾಂಗ್ರೆಸ್ ಜತೆ ಕೈ ಜೋಡಿಸುವ ಸಂಬಂಧ ಚರ್ಚೆ ನಡೆಸಿದರು ಎನ್ನಲಾಗ್ತಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ ಠಾಕ್ರೆ ಪಕ್ಷ ನೇರವಾಗಿ ಸ್ಪರ್ಧಿಸದಿದ್ದರೂ, ಮೋದಿ ಸರ್ಕಾರದ ಟೀಕಾ ಪ್ರಹಾರ ನಡೆಸಿದ್ದರು. ಮೋದಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಬಿಚ್ಚಿಡುತ್ತಾ, ಭಾರಿ ಪ್ರಚಾರಾಂದೋಲನ ನಡೆಸಿದ್ದರು.
ಈ ವೇಳೆ ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್ಸಿಪಿ) ಜತೆ ಕೈಜೋಡಿಸಿದ್ದ ಕಾಂಗ್ರೆಸ್, ರಾಜ್ ಠಾಕ್ರೆ ಜತೆಗಿನ ಮೈತ್ರಿಯನ್ನು ಅಲ್ಲಗಳೆದಿತ್ತು. ಇದೀಗ ಎರಡೂ ಪಕ್ಷಗಳ ನಾಯಕರ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಸೋನಿಯಾ ಭೇಟಿ ಬಳಿಕ, ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರನ್ನು ಭೇಟಿ ಮಾಡಿದ ರಾಜ್ ಠಾಕ್ರೆ, ಮಹಾರಾಷ್ಟ್ರ ಚುನಾವಣೆಯಲ್ಲಿ ಮತಯಂತ್ರಗಳ ಬದಲು ಮತ ಪತ್ರಗಳನ್ನು ಬಳಸುವಂತೆ ಮನವಿ ಮಾಡಿದರು.