ನವದೆಹಲಿ: ಕೇಂದ್ರ ಸರ್ಕಾರ ಅಂಗೀಕರಿಸಿದ ನೂತನ ಕೃಷಿ ಮಸೂದೆಗಳ ವಿರುದ್ಧ ರೈತರು ನಡೆಸುತ್ತಿರುವ ಆಂದೋಲನವು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಜಿದ್ದಿಗೆ ಬಿದ್ದಿದ್ದಾರೆ. ಸರ್ಕಾರ ಮತ್ತು ರೈತರು ನಡುವೆ ಒಮ್ಮತದ ನಿರ್ಧಾರ ಮೂಡದ ನಡುವೆಯೇ ಟ್ಯಾಕ್ಸಿ ಯೂನಿಯನ್ ಈಗ ರೈತರ ಬೆಂಬಲಕ್ಕೆ ನಿಂತಿದೆ.
ಹರಿಯಾಣ-ದೆಹಲಿ ಸಿಂಘು ಗಡಿಯಲ್ಲಿ ಸೋಮವಾರ ಯುನೈಟೆಡ್ ಕಿಸಾನ್ ಮೋರ್ಚಾ ಮಾಧ್ಯಮಗೋಷ್ಟಿ ನಡೆಸಿತು. ರೈತರನ್ನು ಮೋಸಗೊಳಿಸಲು ಮತ್ತು ಅವರನ್ನು ಹಿಮ್ಮೆಟ್ಟಿಸಲು ಸರ್ಕಾರ ಯೋಜಿಸುತ್ತಿರುವುದರಿಂದ ಅವರು ಭಾನುವಾರ ಮಾತುಕತೆಗೆ ಆಹ್ವಾನಿಸಿದ ಸರ್ಕಾರದ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಅಲ್ಲದೆ ಗೃಹ ಸಚಿವ ಅಮಿತ್ ಶಾ ನಮ್ಮ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ತಿಳಿಸಿದ್ದಾರೆ. ಇದಿಷ್ಟೇ ಅಲ್ಲದೆ ಹರಿಯಾಣದ ಪಂಚಾಯತ್ಗಳು ಸಹ ಇಂದಿನಿಂದ ರೈತರಿಗೆ ಬೆಂಬಲ ನೀಡುವುದಾಗಿ ಘೋಷಿಸಿವೆ. ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ಸರ್ಕಾರ ಜಟಾಪಟಿಗೆ ಬಿದ್ದಿದ್ದಾರೆ. ಸರ್ಕಾರ ರೈತರಿಗೆ ತಲೆಬಾಗಲು ಸಿದ್ಧವಿಲ್ಲ ಎಂಬಂತಿದ್ದರೆ ರೈತರು ನ್ಯಾಯ ಸಿಗುವವರೆಗೂ ಹೋರಾಟ ಎಂದು ದೆಹಲಿ ಚಲೋ ಆರಂಭಿಸಿದ್ದಾರೆ. ಈ ರೈತರಿಗೆ ದೇಶದ ನಾನಾ ಸಂಘಟನೆಗಳು ಸಹ ಬೆಂಬಲ ಸೂಚಿಸಿವೆ.
ಫರಿದಾಬಾದ್-ದೆಹಲಿ ಬಾದರ್ಪುರ್ ಗಡಿಯನ್ನೂ ಬಂದ್ ಮಾಡಲು ರೈತರ ನಿರ್ಧಾರ
ಫರಿದಾಬಾದ್-ದೆಹಲಿ ಬಾದರ್ಪುರ್ ಗಡಿಯನ್ನು ಶೀಘ್ರದಲ್ಲೇ ಬಂದ್ ಮಾಡುವುದಾಗಿ ಭಾರತೀಯ ರೈತ ಸಂಘದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ. ಭಾರತೀಯ ರೈತ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ರತನ್ ಸಿಂಗ್ ಸೌರೂತ್ ಅವರೊಂದಿಗೆ ಮಾತನಾಡಿದ ಫರಿದಾಬಾದ್ ಮತ್ತು ಪಾಲ್ವಾಲ್ ರೈತರು ಬಾದರ್ಪುರ ಗಡಿಯನ್ನು ಬಂದ್ ಮಾಡುತ್ತಾರೆ ಮತ್ತು ಬೇಡಿಕೆಗಳು ಈಡೇರಿದ ನಂತರವೇ ಗಡಿ ತೆರೆಯಲಾಗುವುದು ಎಂದು ತಿಳಿಸಿದ್ದಾರೆ.
ಇದೆಲ್ಲದರ ನಡುವೆ ರೈತರಿಗೆ ಪ್ರತಿಭಟನೆಯ ವೇಳೆ ಉಳಿದುಕೊಳ್ಳಲು ಜಾಗ, ಆಹಾರ, ನೀರು, ಬ್ಲಾಂಕೆಟ್ ನೀಡಲಾಗಿದೆ. ಹರಿಯಾಣದ ಖಾಪ್ ಪಂಚಾಯತ್ಗಳು ಚಳಿ ಇರುವ ಕಾರಣ ಕಂಬಳಿಗಳ ನೀಡಿ ಬೆಂಬಲ ಸೂಚಿಸಿವೆ.
ರೈತರ ಆಂದೋಲನ ಬೆಂಬಲಿಸಿ ಉತ್ತರ ಪ್ರದೇಶದ ದಾದ್ರಿಯ ಸ್ವತಂತ್ರ ಅಭ್ಯರ್ಥಿ ಸೋಂಬೀರ್ ಸಂಗ್ವಾನ್ ತಮಗೆ ನೀಡಿದ್ದ ಜಾನುವಾರ ಅಭಿವೃದ್ಧಿ ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಪುಟದಿಂದ ಹೊರಬಂದಿದ್ದಾರೆ. ಅಲ್ಲದೆ ರೈತ ಮುಖಂಡರೊಂದಿಗೆ ಸೇರಿ ದೆಹಲಿಗೆ ಪ್ರಯಾಣಿಸುವುದಾಗಿ ತಿಳಿಸಿದ್ದಾರೆ.
ರೈತರಿಗೆ ಬೆಂಬಲವಾಗಿ ನಿಂತವರು ಯಾರು..?
- ಹರಿಯಾಣದ ಎಲ್ಲಾ ಪಂಚಾಯತ್ಗಳು
- ಹರಿಯಾಣ ತರಕಾರಿ ಮಾರುಕಟ್ಟೆ
- ಹರಿಯಾಣ ಎಲ್ಲಾ ನೌಕರ ಸಂಘ
- ದೆಹಲಿ ಟ್ಯಾಕ್ಸಿ ಯೂನಿಯನ್ ಮತ್ತು ಟ್ರಕ್ ಯೂನಿಯನ್
ಭಾನುವಾರ ತಡರಾತ್ರಿ ರೈತನ ಸಾವು
ಪ್ರತಿಭಟನೆಯ ಐದನೇ ದಿನದಿಂದು ರೈತರು ಸಿಂಘು ಗಡಿಯಲ್ಲಿ ಬೀಡುಬಿಟ್ಟಿದ್ದಾರೆ. ಇಲ್ಲಿನ ಟಿಕ್ರಿ ಗಡಿಯಲ್ಲಿದ್ದ ಕ್ಯಾಂಪ್ನ ರೈತನೋರ್ವ ಮೃತಪಟ್ಟಿದ್ದಾನೆ. ಮೂರು ದಿನಗಳಿಂದ ಅನಾರೋಗ್ಯದಿಂದ ನರಳುತ್ತಿದ್ದ ರೈತ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಈವರೆಗೆ ಪ್ರತಿಭಟನೆಯಲ್ಲಿ ಮೂವರು ರೈತರು ಸಾವನಪ್ಪಿದ್ದಾರೆ.
ರೈತರು ಇಲ್ಲಿನ ಕುಂಡ್ಲಿ ಗಡಿಯಿಂದ ಹಿಂದೆ ಸರಿಯಲು ನಿರಾಕರಿಸಿರುವ ಹಿನ್ನೆಲೆ ದೆಹಲಿ ತಲುಪಬೇಕಿದ್ದ ಸಾವಿರಾರು ಟ್ರಕ್‌ಗಳು ಹೆದ್ದಾರಿಯಲ್ಲಿ ಸಿಲುಕಿವೆ. ಇದು ಸಾಮಾನ್ಯ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ಪರಿಣಾಮ ಬೀರಿರುವುದರಿಂದ ಇದು ಒಂದು ದೊಡ್ಡ ನಷ್ಟವಾಗಿದೆ. ಹಣ್ಣುಗಳು, ತರಕಾರಿಗಳು ಮತ್ತು ಔಷಧಿಗಳನ್ನು ಸಾಗಿಸುವ ಟ್ರಕ್‌ಗಳು ಸಹ ಹೆದ್ದಾರಿಯಲ್ಲಿಯೇ ಸಿಲುಕಿವೆ.
ಈ ನಡುವೆ ಹಣ್ಣು, ತರಕಾರಿ ಸೇರಿ ಕೆಲವು ವಸ್ತುಗಳು ರಸ್ತೆಯಲ್ಲಿಯೇ ಹಾಳಾಗಿವೆ. ಅಲ್ಲದೆ ಲಾರಿ ಚಾಲಕರು ಸಿಬ್ಬಂದಿ ಸಹ ರಸ್ತೆಯಲ್ಲಿಯೇ ಕಾಲ ಕಳೆಯುವ ಸ್ಥಿತಿ ಬಂದೊದಗಿದೆ.