ನವದೆಹಲಿ: ಪೂರ್ವ ಲಡಾಕ್ನಲ್ಲಿ ಭಾರತ - ಚೀನಾ ನಡುವೆ ಸಂಘರ್ಷ ನಡೆದು, ಅನೇಕ ಯೋಧರು ಹುತಾತ್ಮರಾಗಿದ್ದು, ಇದೇ ವಿಷಯವಾಗಿ ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾತನಾಡಿದ್ದಾರೆ. 1962ರ ಬಳಿಕ ಅತ್ಯಂತ ಗಂಭೀರ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಹೇಳಿದ್ದಾರೆ.
1962ರಲ್ಲಿ ಭಾರತ - ಚೀನಾ ನಡುವೆ ಯುದ್ಧ ನಡೆದ ಬಳಿಕ ಇದೇ ಮೊದಲ ಬಾರಿಗೆ ಪೂರ್ವ ಲಡಾಖ್ನಲ್ಲಿ ಇಂತಹ ಸ್ಥಿತಿ ನಿರ್ಮಾಣಗೊಂಡಿದ್ದು, 45 ವರ್ಷದ ನಂತರ ಗಡಿಯಲ್ಲಿ ಸಾವು-ನೋವು ಸಂಭವಿಸಿದ್ದು ನಾವು ನೋಡಿದ್ದೇವೆ ಎಂದಿದ್ದಾರೆ.
ಪೂರ್ವ ಲಡಾಖ್ ವಿಚಾರವಾಗಿ ಈಗಾಗಲೇ ಉಭಯ ದೇಶಗಳ ನಡುವೆ ಮಿಲಿಟರಿ ಸೇರಿದಂತೆ ಅನೇಕ ರಾಜತಾಂತ್ರಿಕ ಸಭೆ ನಡೆದಿದ್ದು, ಯಾವುದೇ ರೀತಿಯ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಜೂನ್ 15ರಂದು ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು.
ಗಡಿಯಲ್ಲಿ ನಿರ್ಮಾಣಗೊಂಡಿರುವ ಬಿಕ್ಕಟ್ಟು ಶಮನ ಮಾಡಲು ಸೇನಾ ಆಯ್ಕೆಗಳು ನಮ್ಮ ಮುಂದೆ ಇವೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿರುವ ಬಿಪಿನ್ ರಾವತ್ ಈಗಾಗಲೇ ಹೇಳಿಕೆ ನೀಡಿದ್ದು, ಅದರ ಬೆನ್ನಲ್ಲೇ ಎಸ್.ಜೈಶಂಕರ್ ಗಡಿ ಪ್ರದೇಶದಲ್ಲಿ ಚೀನಾದೊಂದಿಗೆ ಉಂಟಾಗಿರುವ ಗಡಿ ಬಿಕ್ಕಟ್ಟು ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹಾರ ಮಾಡಲು ನಾವು ಸಿದ್ಧ ಎಂದು ಹೇಳಿದ್ದಾರೆ.
ಲೈನ್ ಆಫ್ ಆ್ಯಕ್ಚುವಲ್ ( ಎಲ್ಎಸಿ) ನಲ್ಲಿ ಸದ್ಯ ಪರಿಸ್ಥಿತಿ ಗಂಭೀರವಾಗಿದ್ದು, ನಮ್ಮ ಗಡಿಯ ಸುರಕ್ಷತೆಗಾಗಿ ನಾವು ಎಲ್ಲ ರೀತಿಯ ಭದ್ರತಾ ಕ್ರಮ ಕೈಗೊಳ್ಳಲು ಸಿದ್ಧ ಎಂದಿದ್ದಾರೆ. ಆದರೆ ಅದಕ್ಕಾಗಿ ಸಂಘರ್ಷದ ಹಾದಿ ಹಿಡಿಯುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.