ನವದೆಹಲಿ: ಈ ವಾರದಿಂದಲೇ ಮುಂಗಾರು ಚುರುಕುಗೊಳ್ಳಲಿದ್ದು, ಬಂಗಾಳದಲ್ಲಿ ವಾಯುಭಾರ ಕುಸಿತ ಉಂಟಾಗಿ, ಒಡಿಶಾ ಹಾಗೂ ರಾಜಸ್ಥಾನ ಸೇರಿ ಮಧ್ಯ ಭಾರತದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಆದರೆ, ಉತ್ತರ ಭಾರತದ ದೆಹಲಿ, ಪಂಜಾಬ್ ಹಾಗೂ ಹರ್ಯಾಣದಲ್ಲಿ ಸಾಧಾರಣ ಮಳೆಯಾಗಲಿದ್ದು, ವಾಯುಭಾರ ಕುಸಿತದ ಪರಿಣಾಮ ಉಂಟಾಗುವುದಿಲ್ಲ ಎಂದೂ ಹೇಳಿದೆ. ಆದರೆ, ಜೂನ್ 30ರ ನಂತರ ಮುಂಗಾರು ಹೆಚ್ಚಾಗಲಿದೆ ಎಂಬುದನ್ನು ಖಾಸಗಿ ಹವಾಮಾನ ಸಂಸ್ಥೆ Skymetನ ಮ್ಯಾನೇಜಿಂಗ್ ಡೈರೆಕ್ಟರ್ ಜತಿನ್ ಸಿಂಗ್ ಸಹ ಒಪ್ಪಿಕೊಂಡಿದ್ದಾರೆ. ಜುಲೈ 15ರವರೆಗೆ ಮುಂಗಾರು ಆರ್ಭಟ ಜೋರಾಗಿರಲಿದೆ ಎಂದೂ ಹೇಳಿದ್ದಾರೆ.
ಬಂಗಾಳದಲ್ಲಿ ಉಂಟಾಗುವ ಹವಾಮಾನ ಬದಲಾವಣೆಯಿಂದ ಒಡಿಶಾ, ಆಂಧ್ರ, ಚತ್ತೀಸ್ಗಢ, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಜೂನ್ ಅಂತ್ಯಕ್ಕೆ ಕೇವಲ ಶೇ.33ರಷ್ಟು ಮಳೆಯಾಗಿದ್ದು, ಸಾಕಷ್ಟು ಕೊರತೆ ಉಂಟಾಗಿದೆ. 36 ಹವಾಮಾನ ಉಪ ವಿಭಾಗಗಳಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದೆ. ಕೊಂಕಣ್ ಹಾಗೂ ಗೋವಾ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳಲ್ಲಿ ಸಾಮಾನ್ಯ ಮಳೆಯಾಗಿದೆ.