ನವದೆಹಲಿ: ಉತ್ತರಪ್ರದೇಶದ ಉನ್ನಾವೋ ಅತ್ಯಾಚಾರ & ಕೊಲೆ ಕೇಸ್ ವಿರುದ್ಧ ಇದೀಗ ಇಡೀ ದೇಶದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ಘಟನೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆ ತನ್ನ ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಸಫ್ಧರ್ ಜಂಗ್ ಆಸ್ಪತ್ರೆಗೆ ಹೊರಗೆ ಇಂದು ಉನ್ನಾವೋ ಅತ್ಯಾಚಾರ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಮಹಿಳೆ ತನ್ನ ಆರು ವರ್ಷದ ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ತಕ್ಷಣವೇ ಬಾಲಕಿಯನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕಳೆದ ಕೆಲ ತಿಂಗಳ ಹಿಂದೆ ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಐದು ಮಂದಿ ಕಾಮುಕರು ಯುವತಿ ಮೇಲೆ ಅಟ್ಟಹಾಸ ಮೆರೆದಿದ್ದರು. ವಿಚಾರಣೆಗೆಂದು ನ್ಯಾಯಾಲಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದರು. ಶೇ.90ರಷ್ಟು ಸುಟ್ಟಗಾಯಗಳಾಗಿದ್ದ 23 ವರ್ಷದ ಸಂತ್ರಸ್ತೆಯನ್ನು ಉತ್ತರಪ್ರದೇಶದ ಲಖನೌನಿಂದ ದೆಹಲಿಗೆ ಕರೆತಂದು ಸಫ್ಧರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 11.40 ಸಮಯದಲ್ಲಿ ಆಕೆ ಕೊನೆಯುಸಿರೆಳೆದಿದ್ದಳು.