ನವದಹೆಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ರೈತರ ಹಾಗೂ ಕೇಂದ್ರ ಸರ್ಕಾರದ ನಡುವಿನ ಮಾತುಕತೆ ಆರಂಭವಾಗಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪಿಯೂಷ್ ಗೋಯಲ್ ಹಾಗೂ ರೈತ ಸಂಘಟನೆಗಳು ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ನೂತನವಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವುದು, ಕನಿಷ್ಠ ಬೆಂಬಲೆಯನ್ನು ಕಾನೂನಾತ್ಮಕವಾಗಿ ಜಾರಿಗೆ ತರುವುದು ಸೇರಿದಂತೆ ಹಲವು ಅಂಶಗಳು ಇಂದಿನ ಚರ್ಚೆಯ ಅಜೆಂಡಾದಲ್ಲಿವೆ ಎಂದು ರೈತರ ಮುಖಂಡರು ಮಾಹಿತಿ ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುತ್ತಮುತ್ತಿನ ಪ್ರದೇಶದಲ್ಲಿ ಬೆಳೆ ತ್ಯಾಜ್ಯವನ್ನು ಸುಡುವ ರೈತರ ವಿರುದ್ಧ ಕ್ರಮ ಕೈಗೊಳ್ಳುವ ಬದಲಾಗಿ ಪರ್ಯಾಯ ಮಾರ್ಗದ ಬಗ್ಗೆ ಚರ್ಚೆ, ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯಡಿ ಚರ್ಚೆ ನಡೆಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. 2020ರ ವಿದ್ಯುತ್ ಬಿಲ್‌ನಲ್ಲಿನ ಬದಲಾವಣೆ ಕುರಿತು ಚರ್ಚಿಸಬೇಕೆಂಬ ಬೇಡಿಕೆ ಇಟ್ಟಿವೆ.
ಕಾಯ್ದೆಗಳನ್ನು ರದ್ದು ಮಾಡುವ ಬಗ್ಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಸಿದ್ದಾರೆ. ಕೇಂದ್ರ ಸರ್ಕಾರ ಈವರೆಗೆ ಸಂಘಟನೆಗಳೊಂದಿಗೆ 5 ಬಾರಿ ಸಭೆಗಳನ್ನು ಕರೆದು ಚರ್ಚೆ ನಡೆಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲೂ ಒಮ್ಮೆ ಮಾತುಕತೆ ನಡೆಸಿದ್ದಾರೆ. ಆದರೆ ಯಾವುದೂ ಫಲ ನೀಡಲಿಲ್ಲ. ಇಂದು ನಡೆಯುತ್ತಿರುವ ಮಾತುಕತೆ ಯಶಸ್ವಿಯಾಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.