ಕುಲ್ಲು : ಪಿರ್ ಪಂಜಾಲ್ ಬೆಟ್ಟದ ಮೇಲಿರುವ ಅಟಲ್ ಟನಲ್ ಉತ್ತರ ಭಾಗದಲ್ಲಿ ಶೀಘ್ರದಲ್ಲೇ ಪ್ರವಾಸಿಗರು ದೇಶದಲ್ಲೇ ಅತ್ಯಂತ ಬೃಹತ್ ಭಗವಾನ್ ಬುದ್ಧನ ಪ್ರತಿಮೆ ನೋಡಲಿದ್ದಾರೆ. ಆಫ್ಘಾನಿಸ್ತಾನದ ಬಾಮಿಯನ್ ಬುದ್ಧನ ಮಾದರಿ 328ಅಡಿ (100 ಮೀ) ಎತ್ತರದ ಬುದ್ಧನ ಪ್ರತಿಮೆ ನಿರ್ಮಿಸಲಾಗುವುದು.
ಅದಕ್ಕಾಗಿ ಸುಮಾರು 500 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತೆ. ಹಿಮಾಚಲ ಪ್ರದೇಶ ರಾಜ್ಯ ಸರ್ಕಾರದ ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ತನ್ನ ತಾತ್ವಿಕ ಅನುಮೋದನೆ ನೀಡಿದೆ. ಪ್ರತಿಮೆಯ ನಿರ್ಮಾಣವನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಗುಜರಾತ್‌ನ ಖಾಸಗಿ ಸಂಸ್ಥೆಗೆ ವಹಿಸಲಾಗುವುದು. ಪಿರ್ ಪಂಜಾಲ್ ಬೆಟ್ಟವನ್ನು ಕೆತ್ತಿಸಿ ಬುದ್ಧನ ಪ್ರತಿಮೆ ನಿರ್ಮಿಸಲಾಗುವುದು.
ತಾಂತ್ರಿಕ ಶಿಕ್ಷಣ ಸಚಿವ ಡಾ.ರಾಮ್ಲಾಲ್ ಮಾರ್ಕಂಡ ಮಾತನಾಡಿ, ಪರ್ವತದ ಒಂದು ಭಾಗವನ್ನು ಮೊದಲು ನೆಲಸಮ ಮಾಡಲಾಗುವುದು. ನಂತರ ರಾಕ್ ಕೆತ್ತನೆ ತಂತ್ರ ಬಳಸಿ ಪ್ರತಿಮೆ ನಿರ್ಮಿಸಲಾಗುತ್ತದೆ. ಇದು ಬುಡಕಟ್ಟು ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ನೀಡುತ್ತದೆ ಎಂದರು.
ಪರ್ವತದಲ್ಲಿ ಕಲ್ಲು ಪರೀಕ್ಷೆಯ ಪ್ರಕ್ರಿಯೆ ಪೂರ್ಣಗೊಂಡಿದೆ. ಅಟಲ್ ಟನಲ್ ಉದ್ಘಾಟನೆಯ ನಂತರ, ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರತಿಮೆ ನಿರ್ಮಿಸಲು ಉದ್ದೇಶಿಸಲಾದ ಸ್ಥಳಕ್ಕೆ ಕರೆದೊಯ್ಯಲಾಗುವುದು ಎಂದು ಹೇಳಿದರು.