ನವದೆಹಲಿ : ಪ್ರಸಿದ್ಧ ಉರ್ದು ಕವಿ 94 ವರ್ಷ ವಯಸ್ಸಿನ ಗುಲ್ಜಾರ್ ಡೆಹ್ಲ್ವಿ ಅವರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕೋವಿಡ್ ಪಾಸಿಟಿವ್ ಬಳಿಕ ನೋಯ್ಡಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಅವರನ್ನು ನಿನ್ನೆ ಡಿಸ್ಚಾರ್ಜ್ ಮಾಡಲಾಗಿದೆ.
ಗುಲ್ಜಾರ್ ಅವರು ಗುಣಮುಖರಾಗಿರುವುದು ಉರ್ದು ಸಾಹಿತ್ಯ ಕ್ಷೇತ್ರದಲ್ಲಿ ಸಂತಸವನ್ನುಂಟು ಮಾಡಿದೆ. ಗುಲ್ಜಾರ್ ಚೇತರಿಕೆ ಕುರಿತಂತೆ, ಅವರ ಪತ್ನಿ ಕವಿತಾ ಅವರು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ಮೇ 28 ರಂದು, ಗುಲ್ಜಾರ್ ಅವರ ದೇಹದ ಉಷ್ಣತೆಯು ಹೆಚ್ಚಾಗಿತ್ತು ಮತ್ತು ಅವರ ಶರೀರ ನಡುಗುತ್ತಿತ್ತು. ಅದರ ಮರುದಿನ ಅವರ ಸ್ಥಿತಿ ತೀರ ಹದಗೆಟ್ಟಿತು. ಮೇ 31ರಂದು ಅವರನ್ನು ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹಾಗೂ ಕೊರೊನಾ ಪರೀಕ್ಷೆಗೊಳಗಾದಾಗ ವರದಿ ಪಾಸಿಟಿವ್ ಬಂದಿತ್ತು. ನಂತರ ಅವರನ್ನು ಶಾರದಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗುಲ್ಜಾರ್ ಅವರ ಮೊಮ್ಮಗಳು ಅಮೆರಿಕದಲ್ಲಿದ್ದು, ಅವರಿಗೆ ಕವನಗಳನ್ನು ಬರೆಯುತ್ತಿದ್ದರು. ಈಗ ಗುಲ್ಜಾರ್ ಚೇತರಿಸಿಕೊಂಡು ಮನೆಗೆ ಮರಳಿರುವುದು ಕುಟುಂಬದಲ್ಲಿ ಸಂತಸ ಮೂಡಿಸಿದೆ.