ವಾರಂಗಲ್: 24 ವರ್ಷದ ಯುವತಿ ಮೇಲೆ 9 ಜನರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ತೆಲಂಗಾಣದ ವಾರಂಗಲ್ನಲ್ಲಿ ನಡೆದಿದೆ. 9 ಆರೋಪಿಗಳಲ್ಲಿ 8 ಜನರನ್ನು ಬಂಧಿಸಿದ್ದು, ಇನ್ನೋರ್ವನಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ಮೂರು ದಿನಗಳ ಹಿಂದೆ ಕೋಥಗುಡೆಮ್ ಜಿಲ್ಲೆಯ ನಿವಾಸಿಯಾದ ಯುವತಿಯೋರ್ವಳು ಹೈದರಾಬಾದ್‌ನಿಂದ ಬಂದು ಮಹಬೂಬಾದ್ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಾಳೆ. ಆದರೆ ತನ್ನ ಗ್ರಾಮಕ್ಕೆ ತೆರಳಲು ಸಾಕಷ್ಟು ಹಣವಿಲ್ಲದ ಕಾರಣ, ಆಕೆ ತನ್ನ ಪರಿಚಯಸ್ಥರೊಬ್ಬರಿಗೆ ಕರೆ ಮಾಡಿ ಸಹಾಯ ಕೇಳಿದ್ದಾಳೆ. ಆ ವ್ಯಕ್ತಿಯು ಯುವತಿಗೆ ಸಹಾಯ ಮಾಡುವುದಾಗಿ ತಿಳಿಸಿ ಒಂದು ಸ್ಥಳಕ್ಕೆ ಬರುವಂತೆ ಹೇಳಿದ್ದು, ಆಟೋ ಮಾಡಿಸಿಕೊಂಡು ಆಕೆ ಅಲ್ಲಿಗೆ ಹೋಗಿದ್ದಾಳೆ.
ಯುವತಿ ತನ್ನ ಪರಿಚಯಸ್ಥನನ್ನು ಭೇಟಿ ಮಾಡುವ ಮುನ್ನವೇ ಆಟೋ ಚಾಲಕ ಹಾಗೂ ಆತನ ಸ್ನೇಹಿತರು ಆಕೆಯನ್ನ ಮಾವಿನ ತೋಪಿಗೆ ಎಳೆದೋಯ್ದು ಅತ್ಯಾಚಾರ ಎಸಗಿದ್ದಾರೆ. ಇದನ್ನು ಗಮನಿಸಿರುವ ಕೆಲ ದಾರಿಹೋಕರು ಗ್ರಾಮದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದು, ಅವರು ಘಟನಾ ಸ್ಥಳವನ್ನು ತಲುಪುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಬಳಿಕ ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೋಮವಾರ ಒಬ್ಬ ಆರೋಪಿಯನ್ನು ಹೊರತುಪಡಿಸಿ ಎಂಟು ಮಂದಿಯನ್ನು ಬಂಧಿಸಿದ್ದಾರೆ.