ಅದು 1945 ನೇ ಇಸ್ವಿ ಜುಲೈ 16ನೇ ತಾರೀಕು....
ಇದೇ ದಿನ ಅಮೆರಿಕ ಪ್ರಥಮ ಬಾರಿಗೆ ಅಣುಬಾಂಬ್ ಒಂದನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿತ್ತು. ನಂತರ ಅದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ಜಪಾನ್ ದೇಶದ ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಅಮೆರಿಕದ ಯುದ್ಧವಿಮಾನಗಳು ಅಣುಬಾಂಬ್ ದಾಳಿ ನಡೆಸಿದ್ದವು. ಕ್ಷಣ ಮಾತ್ರದಲ್ಲಿ ಎರಡೂ ದೊಡ್ಡ ನಗರಗಳು ಅಣು ಸ್ಫೋಟದಿಂದ ಸ್ಮಶಾನ ಸದೃಶವಾಗಿ ಬದಲಾಗಿದ್ದವು. ಜಗತ್ತು ಈ ಹಿಂದೆಂದೂ ಕಾಣದ ಭೀಕರ ಶಕ್ತಿಯ ಅಣುಬಾಂಬ್ಗಳನ್ನು ಅಮೆರಿಕ ಪ್ರಥಮ ಬಾರಿಗೆ ಜಪಾನ್ ಮೇಲೆ ಪ್ರಯೋಗಿಸಿತ್ತು.
ಲಕ್ಷಾಂತರ ಜನರ ಸಾವು-ನೋವಿಗೆ ಕಾರಣವಾದ ಆ ದೈತ್ಯ ಬಾಂಬ್ಗಳು ತಯಾರಾಗಿ ಇಂದಿಗೆ 75 ವರ್ಷ. ಇಡೀ ಜಗತ್ತಿಗೇ ಕಂಟಕವಾಗಿರುವ ಅಣುಬಾಂಬ್ಗಳು, ಅವುಗಳ ಇತಿಹಾಸ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ಅಣುಬಾಂಬ್ಗಳ ಪಾತ್ರ ಏನಿದೆ ಎಂಬುದರ ಒಂದು ಅವಲೋಕನ ಇಲ್ಲಿದೆ.
ಅದು ಮ್ಯಾನ್ಹ್ಯಾಟನ್ ಪ್ರೊಜೆಕ್ಟ್ !
ಅಮೆರಿಕದ ಅಣುಬಾಂಬ್ ತಯಾರಿಸುವ ಯೋಜನೆಗೆ ಮ್ಯಾನ್ಹ್ಯಾಟನ್ ಪ್ರೊಜೆಕ್ಟ್ ಎಂದು ಹೆಸರಿಡಲಾಗಿತ್ತು. ಆಗಿನ ಅಮೆರಿಕದ ಅಧ್ಯಕ್ಷ ರೂಸ್ವೆಲ್ಟ್ ಅವರ ಅವಧಿಯಲ್ಲಿ 1939 ರಲ್ಲಿ ಈ ಪ್ರೊಜೆಕ್ಟ್ ಆರಂಭವಾಯಿತು. ಇದರನ್ವಯ 1943 ರಲ್ಲಿ ಲಾಸ್ ಅಲಾಮೋಸ್ನಲ್ಲಿ ಅಣುಬಾಂಬ್ ತಯಾರಿಕೆ ಹಾಗೂ ಪರೀಕ್ಷಣಾ ಪ್ರಯೋಗಾಲಯ ಆರಂಭಗೊಂಡಿತು. ಈ ಲ್ಯಾಬ್ ಅನ್ನು ಪ್ರೊಜೆಕ್ಟ್ 'ವೈ' (Project Y) ಎಂದು ಕರೆಯಲಾಗುತ್ತಿತ್ತು. ಈ ಪ್ರಯೋಗಾಲಯದಲ್ಲಿ ಪ್ರಮುಖವಾಗಿ ಎರಡು ಮಾದರಿಯ ಅಣುಬಾಂಬ್ಗಳನ್ನು ತಯಾರಿಸುವ ಸಂಶೋಧನೆಗಳು ನಡೆದವು. ಯುರೇನಿಯಂ ಆಧರಿತ ದಿ ಲಿಟಲ್ ಬಾಯ್ (The Little Boy) ಬಾಂಬ್ ಹಾಗೂ ಪ್ಲುಟೋನಿಯಂ ಆಧರಿತ ದಿ ಫ್ಯಾಟ್ ಮ್ಯಾನ್ (The Fat Man) ಬಾಂಬ್ಗಳನ್ನು ವಿಜ್ಞಾನಿಗಳು ಇಲ್ಲಿ ತಯಾರಿಸಿದ್ದರು.
ಟ್ರಿನಿಟಿ ಪ್ರಯೋಗ.. ಅಣುಬಾಂಬ್ನ ಪ್ರಥಮ ಪರೀಕ್ಷೆ
ಲಾಸ್ ಅಲಾಮೋಸ್ ಲ್ಯಾಬ್ ಮುಖ್ಯಸ್ಥ ಜೆ. ರಾಬರ್ಟ್ ಓಪನ್ಹೀಮರ್ ಅಣುಬಾಂಬ್ನ ಪ್ರಥಮ ಪ್ರಯೋಗಕ್ಕೆ ಟ್ರಿನಿಟಿ ಟೆಸ್ಟ್ ಎಂದು ಹೆಸರಿಟ್ಟಿದ್ದರು. 16 ಜುಲೈ, 1945 ರ ಚುಮುಚುಮು ಬೆಳಗಿನ 4 ಗಂಟೆಗೆ ಅಣುಬಾಂಬ್ ಸ್ಫೋಟವಾಗಬೇಕಿತ್ತು. ಆದರೆ ಮಳೆ ಬಂದ ಕಾರಣ ಸ್ಫೋಟದ ಸಮಯವನ್ನು ಮುಂದೂಡಲಾಗಿತ್ತು. ನಂತರ ಮುಂದಿನ ಒಂದೂವರೆ ಗಂಟೆ ಅಂದರೆ ಬೆಳಗಿನ 5.30 ಕ್ಕೆ ಅಣುಬಾಂಬ್ ಅನ್ನು ಸ್ಫೋಟಿಸಲಾಯಿತು. ಭೂಮಿಯಿಂದ 40 ಸಾವಿರ ಅಡಿಗಳ ಎತ್ತರಕ್ಕೆ ಅಣಬೆಯಾಕಾರದಲ್ಲಿ ಬೆಂಕಿ ಹಾಗೂ ಹೊಗೆಯ ಕಾರ್ಮೋಡ ಸೃಷ್ಟಿಯಾಗಿ ಅಣುಬಾಂಬ್ ಪರೀಕ್ಷೆ ಸಂಪೂರ್ಣ ಯಶಸ್ವಿಯಾಗಿತ್ತು. ಈ ಸ್ಫೋಟ 15 ರಿಂದ 20 ಸಾವಿರ ಟನ್ ಟಿಎನ್ಟಿ ವಸ್ತುವನ್ನು ಒಂದೇ ಬಾರಿಗೆ ಸ್ಫೋಟಿಸಿದಷ್ಟು ಶಕ್ತಿಶಾಲಿಯಾಗಿತ್ತು. (TNT- ಟ್ರಿನಿಟೊ ನೈಟ್ರೊ ಟಾಲೀನ್. ಇದು ಸಾಮಾನ್ಯವಾಗಿ ಬಾಂಬ್ಗಳಲ್ಲಿ ಬಳಸುವ ಸ್ಫೋಟಕವಾಗಿದೆ.)
ಮ್ಯಾನ್ಹ್ಯಾಟನ್ ಪ್ರೊಜೆಕ್ಟ್ಗೆ ಖರ್ಚಾಗಿದ್ದೆಷ್ಟು?
ಆರಂಭದಲ್ಲಿ ಈ ಯೋಜನೆಗೆ ಕೇವಲ 6 ಸಾವಿರ್ ಡಾಲರ್ ಮೊತ್ತವನ್ನು ನಿಗದಿ ಮಾಡಲಾಗಿತ್ತು. ಆದರೆ 1941 ರಲ್ಲಿ ಯಾವಾಗ ಅಮೆರಿಕ ಎರಡನೇ ವಿಶ್ವಯುದ್ಧಕ್ಕೆ ಧುಮುಕಿತೋ ಆವಾಗ ಈ ಯೋಜನೆಯ ಮೇಲಿನ ವೆಚ್ಚ ನಿರ್ಬಂಧವನ್ನು ತೆಗೆದುಹಾಕಲಾಯಿತು ಹಾಗೂ ಇದಕ್ಕೆ ಎಷ್ಟು ಅಗತ್ಯವೋ ಅಷ್ಟು ಮೊತ್ತ ನೀಡಲು ಅಮೆರಿಕ ನಿರ್ಧರಿಸಿತು. ಆಗಿನ ಕಾಲಕ್ಕೇ ಈ ಯೋಜನೆಗಾಗಿ ಸುಮಾರು 2 ಬಿಲಿಯನ್ ಡಾಲರ್ ಖರ್ಚು ಮಾಡಲಾಗಿತ್ತು ಎಂದು ಆಂಕಿ ಅಂಶಗಳಿಂದ ತಿಳಿದು ಬರುತ್ತದೆ.
ಅಣುಬಾಂಬ್ ಯುಗದ ಆರಂಭ
ಅಮೆರಿಕವು ಯಶಸ್ವಿಯಾಗಿ ಅಣು ಪರೀಕ್ಷೆ ಮಾಡಿದ ನಂತರ ವಿಶ್ವದ ಹಲವಾರು ರಾಷ್ಟ್ರಗಳು ಅಣುಬಾಂಬ್ ತಯಾರಿಕೆಗೆ ಮುಂದಾದವು. ಭಾರತ, ಪಾಕಿಸ್ತಾನ, ದಕ್ಷಿಣ ಕೊರಿಯಾ ಮತ್ತು ಇಸ್ರೇಲ್ಗಳು ಸದ್ಯ ಅಣುಬಾಂಬ್ಗಳನ್ನು ಹೊಂದಿವೆ. ಆದರೆ ವಿಶ್ವಸಂಸ್ಥೆಯಲ್ಲಿ ವೀಟೊ ಅಧಿಕಾರ ಹೊಂದಿರುವ ಐದು ರಾಷ್ಟ್ರಗಳನ್ನು ಮಾತ್ರ ಅಧಿಕೃತ ಅಣುಬಾಂಬ್ ಹೊಂದಿರುವ ದೇಶಗಳೆಂದು ಪರಿಗಣಿಸಲಾಗಿದೆ. ಇಸ್ರೇಲ್ ಈವರೆಗೂ ಅಣುಬಾಂಬ್ ಪರೀಕ್ಷೆ ಮಾಡಿಲ್ಲ ಎಂಬುದು ಗಮನಾರ್ಹ.
2020 ರಲ್ಲಿ ವಿವಿಧ ದೇಶಗಳ ಬಳಿ ಇರುವ ಅಣು ಸಿಡಿತಲೆಗಳ ಸಂಖ್ಯೆ ಹೀಗಿದೆ:
ದೇಶ | ಪ್ರಥಮ ಅಣು ಪ್ರಯೋಗ | ಒಟ್ಟು ಅಣು ಸಿಡಿತಲೆಗಳ ಸಂಖ್ಯೆ | ಒಟ್ಟು ಅಣು ಪರೀಕ್ಷೆಗಳು |
ಅಮೆರಿಕ | 16.07.1945 | 5800 | 1030 |
ರಷ್ಯಾ | 1949 ಆಗಸ್ಟ್ | 6375 | 715 |
ಯುಕೆ | ಅಕ್ಟೋಬರ್ 1962 | 215 | 45 |
ಫ್ರಾನ್ಸ್ | 1960 ಫೆಬ್ರವರಿ | 290 | 210 |
ಚೀನಾ | 1964 ಅಕ್ಟೋಬರ್ | 320 | 45 |
ಭಾರತ | ಮೇ 1974 | 150 | 3 |
ಪಾಕಿಸ್ತಾನ | ಮೇ 1998 | 160 | 3 |
ಉತ್ತರ ಕೊರಿಯಾ | 2006 ಅಕ್ಟೋಬರ್ | 30-40 | 6 |
ಇಸ್ರೇಲ್ | 90 | -- |
ಜಗತ್ತಿನ ಶಕ್ತಿಶಾಲಿ ಅಣುಬಾಂಬ್ಗಳು
ದೇಶ | ನ್ಯೂಕ್ಲಿಯರ್ ಬಾಂಬ್ ಹೆಸರು | ವಿವರ |
ರಷ್ಯಾ | ಝಾರ್ ಬೊಂಬಾ (RDS-220 hydrogen bomb) | RDS-220 ಹೈಡ್ರೋಜನ್ ಬಾಂಬ್ ಅನ್ನು ಝಾರ್ ಬೊಂಬಾ ಎಂದೂ ಕರೆಯಲಾಗುತ್ತದೆ. ಇದು ವಿಶ್ವದಲ್ಲಿ ತಯಾರಾದ ಅತಿ ಹೆಚ್ಚು ಸಾಮರ್ಥ್ಯದ ಅಣುಬಾಂಬ್ ಆಗಿದೆ. ಇದನ್ನು ಭೂಮಿಯಿಂದ 4 ಕಿಮೀ ಅಂತರದಲ್ಲಿ ಸ್ಫೋಟಿಸಲಾಗಿತ್ತು. ಹಿರೋಶಿಮಾ ಮೇಲೆ ಹಾಕಲಾದ ಅಣುಬಾಂಬ್ಗೆ ಹೋಲಿಸಿದರೆ, ಇದು 3800 ಅಂಥ ಬಾಂಬ್ಗಳಿಗೆ ಸಮನಾಗಿದೆ ಎಂದರೆ ಇದರ ಶಕ್ತಿ ಅರಿವಾಗುತ್ತದೆ. ಇದನ್ನು 1961 ರಲ್ಲಿ ಪರೀಕ್ಷೆ ಮಾಡಲಾಗಿತ್ತು. |
ಅಮೆರಿಕ | B41 ನ್ಯೂಕ್ಲಿಯರ್ ಬಾಂಬ್ | 25 ಎಂಟಿ ಸಾಮರ್ಥ್ಯದ B41 ಅಣುಬಾಂಬ್ಗಳು ಅಮೆರಿಕದ ಬತ್ತಳಿಕೆಯಲ್ಲಿರುವ ಅತಿ ಶಕ್ತಿಶಾಲಿ ಅಣುಬಾಂಬ್ಗಳಾಗಿವೆ. 1960 ರಿಂದ 62 ರ ಅವಧಿಯಲ್ಲಿ ಅಮೆರಿಕ ಇಂಥ 500 ಬಾಂಬ್ಗಳನ್ನು ತಯಾರಿಸಿತ್ತು. |
ಅಮೆರಿಕ | TX-21 ಶ್ರಿಂಪ್ (ಕಾಸಲ್ ಬ್ರಾವೊ) | ಶ್ರಿಂಪ್ ಹೆಸರಿನ ಥರ್ಮೊನ್ಯೂಕ್ಲಿಯರ್ ಬಾಂಬ್ ಅನ್ನು ಅಮೆರಿಕ 1, ಮಾರ್ಚ್ 1954 ರಲ್ಲಿ ಪರೀಕ್ಷೆ ಮಾಡಿತ್ತು. ಇವು 14.8 ಎಂಟಿ ಸಾಮರ್ಥ್ಯ ಹೊಂದಿವೆ. |
ಅಮೆರಿಕ | Mk-17/EC-17 | 18 ಟನ್ ತೂಕದ ಎಂಕೆ-17 ಅಣುಬಾಂಬ್ಗಳು ಅಮೆರಿಕ ತಯಾರಿಸಿದ ಅತಿ ತೂಕದ ಅಣುಬಾಂಬ್ಗಳಾಗಿವೆ. |
ಅಮೆರಿಕ | MK 24/B-24 | ಎಂಕೆ 24 ಹೆಸರಿನ ಈ ಬಾಂಬ್ಗಳು 10 ಎಂಟಿ ಯಿಂದ 15 ಎಂಟಿ ಸಾಮರ್ಥ್ಯ ಹೊಂದಿದ್ದವು. |
ಜಗತ್ತಿನ ಮೇಲೆ ಅಣು ಯುದ್ಧದ ಕಾರ್ಮೋಡ ಕವಿದಿದ್ದ ಕ್ಷಣಗಳು! ...
1962 - ಕ್ಯೂಬಾ ಕ್ಷಿಪಣಿ ಪ್ರಕರಣ: 1962 ರಲ್ಲಿ ಕ್ಯೂಬಾ ಕ್ಷಿಪಣಿ ಪರೀಕ್ಷೆ ಸಂದರ್ಭದಲ್ಲಿ ಅಮೆರಿಕ ಹಾಗೂ ರಷ್ಯಾ ಪರಸ್ಪರ ಅಣುಬಾಂಬ್ ದಾಳಿಗೆ ಸಜ್ಜಾಗಿದ್ದವು. ಆದರೆ ಅದಾವುದೋ ಕಾರಣದಿಂದ ಈ ದಾಳಿ ನಡೆಯದೆ ವಿಶ್ವವೇ ನಿಟ್ಟುಸಿರು ಬಿಡುವಂತಾಯಿತು.
1983 - ಅಣುಯುದ್ಧವನ್ನು ಕೂದಲೆಳೆ ಅಂತರದಲ್ಲಿ ತಡೆದಿದ್ದ ಸೋವಿಯತ್ ರಷ್ಯಾ ಮಿಲಿಟರಿ ಜನರಲ್: ಮಾಸ್ಕೊ ನಗರದ ದಕ್ಷಿಣ ಭಾಗದ ಬಂಕರ್ ಒಂದರಲ್ಲಿ ರಷ್ಯಾ ಮಿಲಿಟರಿ ಅಧಿಕಾರಿಗಳು ಸ್ಯಾಟಲೈಟ್ ಸಂದೇಶಗಳನ್ನು ಗ್ರಹಿಸುತ್ತಿದ್ದರು. ಅಮೆರಿಕವು ಮಿನಿಟ್ಮ್ಯಾನ್ ಎಂಬ ಹೆಸರಿನ ಅಣು ಕ್ಷಿಪಣಿಯನ್ನು ರಷ್ಯಾದತ್ತ ಹಾರಿಬಿಟ್ಟಿದೆ ಎಂದು ಸಂದೇಶಗಳು ಬರತೊಡಗಿದವು. ಆಗ ಸ್ಟಾನಿಸ್ಲಾವ್ ಪೆಟ್ರೋವ್ ಎಂಬ ಸೈನ್ಯ ಅಧಿಕಾರಿ ಕಮಾಂಡಿಂಗ್ ಆಫೀಸರ್ ಆಗಿದ್ದರು. ಇನ್ನೇನು ಅಮೆರಿಕದ ದಾಳಿಯ ಬಗ್ಗೆ ಉನ್ನತ ಅಧಿಕಾರಿಗಳಿಗೆ ಆತ ತಿಳಿಸಿ, ಅದೇ ಪ್ರಮಾಣದ ಪ್ರತಿದಾಳಿಯನ್ನು ಆರಂಭಿಸಲು ಸೂಚಿಸಬೇಕಿತ್ತು. ಆದರೆ ಅದೇನೋ ಸಂಶಯ ಬಂದ ಕಾರಣ ಆತ ಈ ವಿಷಯವನ್ನು ತಕ್ಷಣ ಹಿರಿಯ ಅಧಿಕಾರಿಗಳಿಗೆ ತಿಳಿಸಲೇ ಇಲ್ಲ. ಆದರೆ ಆಮೇಲೆ ತಿಳಿದು ಬಂದಿದ್ದು- ಮೋಡಗಳ ಮೇಲಿನ ಸೂರ್ಯನ ಪ್ರತಿಫಲನವನ್ನೇ ಕ್ಷಿಪಣಿಗಳೆಂದು ತಪ್ಪಾಗಿ ಭಾವಿಸಲಾಗಿತ್ತು. ಈ ಸಂದರ್ಭದಲ್ಲಿ ರಷ್ಯಾ ಏನಾದರೂ ದಾಳಿ ಆರಂಭಿಸಿದ್ದರೆ ನೂರಲ್ಲ, ಸಾವಿರಾರು ಅಣುಬಾಂಬ್ಗಳು ಅಮೆರಿಕವನ್ನು ಸುಟ್ಟು ಬೂದಿ ಮಾಡಿಬಿಡುತ್ತಿದ್ದವು. ಕಮಾಂಡಿಂಗ್ ಆಫೀಸರ್ನ ಒಂದು ನಿರ್ಧಾರ ಅಣುಯುದ್ಧವನ್ನು ದೂರ ಮಾಡಿತ್ತು.