ಕೋಲ್ಕತ್ತಾ: ಕಟ್ಟಡದ ಬಾತ್ರೂಮ್ನಲ್ಲಿ ಆರು ವರ್ಷದ ಬಾಲಕಿಯನ್ನು ಕೂಡಿ ಹಾಕಿ ಅತ್ಯಾಚಾರ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.
ಕೋಲ್ಕತ್ತಾದ ಉದ್ಯಾನವನವಿರುವ ಪ್ರದೇಶದಲ್ಲಿ ಕಳೆದ ಗುರುವಾರ ಈ ಘಟನೆ ನಡೆದಿದ್ದು, ತಾರತಾಲ ರಸ್ತೆಯಲ್ಲಿರುವ ಕಟ್ಟಡದ ಮೊದಲ ಮಹಡಿಯಲ್ಲಿ ಬಾತ್‍ರೂಮ್ ಒಳಗೆ ಕೂಡಿಹಾಕಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರ ಮಾಡಿದ 19 ವರ್ಷದ ಯುವಕನನ್ನು ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯವೆಸಗಿರುವ ಯುವಕ ಬಾಲಕಿ ವಾಸವಾಗಿದ್ದ ನೆರೆ ಮನೆಯವನಾಗಿದ್ದು, ಆಕೆಯನ್ನು ಕರೆದುಕೊಂಡು ಹೋಗಿ ಈ ರೀತಿ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯು ಮನೆಗೆ ಬಂದು ಈ ವಿಚಾರವನ್ನು ತನ್ನ ತಾಯಿಗೆ ಹೇಳಿದ ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಾಯಿ ನೀಡಿದ ದೂರಿನ ಮೇರೆಗೆ ನಾವು ಆರೋಪಿಯನ್ನು ಅರೆಸ್ಟ್ ಮಾಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಬಾಲಕಿಯ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದು, ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ.