ತಿರುವನಂತಪುರಂ: ಇಲ್ಲಿ ನಡೆದಿದ್ದ ಸಿಪಿಐಎಂ ಕಾರ್ಯಕರ್ತರಿಬ್ಬರ ಕೊಲೆ ಪ್ರಕರಣ ಸಂಬಂಧ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಮಧ್ಯರಾತ್ರಿಯಂದು ಸಿಪಿಐಎಂ ಯುವ ಘಟಕದ ಹಕ್ ಮೊಹಮ್ಮದ್ (24) ಹಾಗೂ ಮಿಥಿಲಾಜ್ (32) ಎಂಬುವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೈಗೈಯಲಾಗಿತ್ತು.
ಕತ್ತಿ, ಚಾಕು ಹಿಡಿದು ಬೈಕ್ನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಇಬ್ಬರನ್ನೂ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಘಟನೆ ಸಂಬಂಧ ಸೇಜಿತ್, ಅಜಿತ್, ನಜೀಬ್, ಸಾಥಿ ಎಂಬುವರನ್ನು ಬಂಧಿಸಲಾಗಿದೆ. ಇವರಲ್ಲದೆ ಸಂಜೀವ್ ಹಾಗೂ ಸನಲ್ಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದಲ್ಲದೆ ಪೊಲೀಸ್ ಎಫ್ಐಆರ್ನಲ್ಲಿ ಇದೊಂದು ರಾಜಕೀಯ ಪ್ರೇರಿತ ಕೊಲೆ ಎಂದು ನಮೂದಿಸಿಲ್ಲವಾದರೂ, ಇದಕ್ಕೂ ಮೊದಲೇ ಈ ಗುಂಪುಗಳ ನಡುವೆ ಗಲಾಟೆ ನಡೆದಿತ್ತು. 2019ರ ಲೋಕಸಭಾ ಚುನಾವಣೆಯ ವೇಳೆ ಗಲಾಟೆಗಳಾಗಿದ್ದು, ಬಳಿಕ ಪರಿಸ್ಥಿತಿ ತಣ್ಣಗಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಸಿಪಿಐಎಂ ನಾಯಕರು ಹಾಗೂ ಸಿಎಂ ಪಿಣರಾಯಿ ವಿಜಯನ್ ಸಹ ಘಟನೆಯನ್ನು ಖಂಡಿಸಿದ್ದು, ಕೊಲೆ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ. ಆದರೆ ಕಾಂಗ್ರೆಸ್ ಈ ಕೊಲೆಯಲ್ಲಿ ಪಕ್ಷದ ಯಾವುದೇ ಪಾತ್ರವಿಲ್ಲ ಎಂದಿದೆ.
ಮಧ್ಯರಾತ್ರಿಯಲ್ಲಿ ಇಬ್ಬರು ಬೈಕ್ನಲ್ಲಿ ಬರುತ್ತಿದ್ದ ವೇಳೆ 2 ಬೈಕ್ನಲ್ಲಿ ಬಂದ ಐವರು ಇವರನ್ನು ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮಿಥಿಲಾಜ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಮೊಹಮ್ಮದ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಘಟನೆಯ ಬಳಿಕ ಸಿಪಿಐಎಂ ಕಾರ್ಯಕರ್ತರು ಕೊಲ್ಲಮ್ ಜಿಲ್ಲೆಯ ಹಲವು ಕಾಂಗ್ರೆಸ್ ಕಚೇರಿಗಳಿಗೆ ಹಾನಿ ಮಾಡಿರುವ ಘಟನೆ ಸಹ ವರದಿಯಾಗಿದೆ.