ನವದೆಹಲಿ: ಇಂದಿನಿಂದ ಆರ್ಬಿಐನ ಮೂರು ದಿನಗಳ ಮಹತ್ವದ ಸಭೆ ಆರಂಭವಾಗಲಿದೆ. ಮೂರನೇ ದಿನದ ಕೊನೆಯಲ್ಲಿ ಸತತ ಆರನೇ ಬಾರಿ ರೆಪೋ ದರ ಕಡಿತ ಮಾಡುವ ಸಂಭವ ಇದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ತಯಾರಕ ವಲಯ ಹಾಗೂ ಬ್ಯಾಂಕರ್ಗಳು ಹೇಳುವ ಪ್ರಕಾರ, ಸತತವಾಗಿ ಕುಸಿಯುತ್ತಿರುವ ಆರ್ಥಿಕತೆ ಮೇಲೆತ್ತಲು ಸತತ ಆರನೇ ಬಾರಿಯೂ ರೆಪೋ ದರ ಕಡಿತ ಮಾಡುವ ಸಾಧ್ಯತೆ ಇದೆ. ಇದರಿಂದ ಬ್ಯಾಂಕ್ಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಹಣಕಾಸು ನೆರವು ಸಿಗಲಿದೆ. ಇನ್ನು ಗ್ರಾಹಕರಿಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯಲಿದೆ. ಅಲ್ಲದೆ, ಇಎಂಐಗಳ ಬಡ್ಡಿದರದಲ್ಲೂ ಕೊಂಚ ರಿಲೀಫ್ ಸಿಗುವ ಸಾಧ್ಯತೆ ಇದೆ.
ಬ್ಯಾಂಕ್ಗಳಿಗೆ ಹಣದ ಹರಿವು ಹೆಚ್ಚಾಗುವುದರಿಂದ ವ್ಯವಹಾರ ಆ ಮೂಲಕ ಆರ್ಥಿಕತೆಗೆ ಚೇತರಿಕೆ ಸಿಗುವ ಸಾಧ್ಯತಗೆಳಿವೆ. ಜುಲೈ - ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ 4.5 ಕ್ಕೆ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಆರ್ಬಿಐನ ಈ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ. ಹೀಗಾಗಿ ಆರ್ಬಿಐ ಮತ್ತೊಮ್ಮೆ ರೆಪೋ ದರ ಕಡಿತ ಮಾಡಿ ಬ್ಯಾಂಕ್ಗಳಿಗೆ ಶಕ್ತಿ ತುಂಬವ ಕೆಲಸ ಮಾಡಲಿದೆ ಎನ್ನಲಾಗಿದೆ.